ಕಲಬುರಗಿ : 2023ರ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್ ಕೊಡಲು ಆಮ್ ಆದ್ಮಿ ಪಕ್ಷ ತಯಾರಿ ನಡೆಸಿದೆ. ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಪಕ್ಷ ಬಲವರ್ಧನೆಗೆ ರಾಷ್ಟ್ರೀಯ ನಾಯಕರು ಆಗಮಿಸಲಿದ್ದು, ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಕಣಕ್ಕಿಳಿಸುವುದಾಗಿ ಕಲಬುರಗಿಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.
ಮೂರು ಪಕ್ಷಗಳು ಆಪ್ ಯೋಜನೆಗಳನ್ನು ಕಾಪಿ ಮಾಡ್ತಿವೆ: ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡ್ತಿದೆ. ಸ್ವತಂತ್ರ ಬುದ್ಧಿ ಕಳೆದುಕೊಂಡ ಮುಖ್ಯಮಂತ್ರಿ ನೇತೃತ್ವದ ಸರ್ಕಾರ ನಡೆಯುವುದು ದುಸ್ತರವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳು ಆಮ್ ಆದ್ಮಿ ಪಕ್ಷದ ಜನಪರ ಯೋಜನೆಗಳನ್ನ ಕಾಪಿ ಮಾಡ್ತಿದ್ದಾರೆ. ಉಚಿತ ವಿದ್ಯುತ್, ಗೃಹಣಿಯರಿಗೆ ಮಾಸಿಕ 2 ಸಾವಿರ, ಮಾದರಿ ಆಸ್ಪತ್ರೆ ನಿರ್ಮಾಣ ಯೋಜನೆಗಳನ್ನು ಕಾಪಿ ಮಾಡಿ ಜನರಿಗೆ ಆಶ್ವಾಸನೆ ನೀಡ್ತಿದ್ದಾರೆ. ಜೆಡಿಎಸ್ ಜಗಳಗಂಟ ಪಕ್ಷ, ಕಾಂಗ್ರೆಸ್ ಕಲುಷಿತ ಪಕ್ಷ, ಬಿಜೆಪಿ ಬೊಗಳೆ ಸರ್ಕಾರ ಆಗಿವೆ ಎಂದು ಮೂರು ಪಕ್ಷಗಳ ವಿರುದ್ಧ ಹರಿಹಾಯ್ದರು.
ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ನಿಲುವು ಹೊಂದಿದ್ದು, ರಾಜ್ಯದ 224 ಕ್ಷೇತ್ರದಲ್ಲಿ ಪಕ್ಷ ಸಂಘಟನೆಗಾಗಿ ದೆಹಲಿ ಸಿಎಂ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ ಮಾನ್, ಪ್ರಮುಖ ಸಚಿವರು, ಶಾಸಕರುಗಳು ರಾಜ್ಯಕ್ಕೆ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಯಾವುದೇ ಪಕ್ಷ ಗೆದ್ದರೂ ನಾವು ಎರಡನೇ ಸ್ಥಾನದಲ್ಲಾದರೂ ಇರುತ್ತೇವೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.
ಜನಪರ ಯೋಜನೆಗಳಿಂದಲೇ ಪಂಜಾಬ್ನಲ್ಲಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ: ಬೊಗಳೆ ಬಿಟ್ಟಕೊಂಡು, ಸುಳ್ಳು ಹೇಳಿಕೊಂಡು ಓಡಾಡುವ ಪಕ್ಷ ನಮ್ಮದಲ್ಲ. ಕೇಂದ್ರಾಡಳಿತದಿಂದ ಇತಿಮಿತಿ ಇದ್ದರೂ ಇರುವ ಅಧಿಕಾರದಲ್ಲಿಯೇ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಜನಪರ ಆಡಳಿತ ನೀಡುತ್ತಿದೆ. ಪ್ರಣಾಳಿಕೆಯ ಎಲ್ಲಾ ಭರವಸೆಗಳನ್ನ ಕಾರ್ಯರೂಪಕ್ಕೆ ತಂದಿದ್ದೇವೆ. ಕೇಜ್ರಿವಾಲ್ ಅವರ ಜನಪರ ಯೋಜನೆಗಳಿಂದಲೇ ಪಂಜಾಬ್ನಲ್ಲಿ ಆಮ್ ಆದ್ಮಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಅವರ ತವರು ಗುಜರಾತ್ ನಲ್ಲಿಯೂ ಆಮ್ ಆದ್ಮಿ ಗೆಲ್ಲುವ ಭರವಸೆ ಇತ್ತು. ಆದರೆ ತೋಳ್ಬಲ, ಹಣಬಲ, ಅಧಿಕಾರ ಬಲದಿಂದ ಸೋಲಿಸಲಾಗಿದೆ. ಈ ಎಲ್ಲದರ ನಡುವೆಯೂ ಕಾಂಗ್ರೆಸ್ ಮಾಡಲು ಆಗದ ಸಾಧನೆಯನ್ನು ಆಮ್ ಆದ್ಮಿ ಪಕ್ಷ ಗುಜರಾತ್ನಲ್ಲಿ ಸಾಧಿಸಿ ತೋರಿಸಿದೆ. ದೇಶದಲ್ಲಿ ಬಿಜೆಪಿಗೆ ಸೆಡ್ಡು ಹೊಡೆಯುವ ಶಕ್ತಿ ಇರುವ ಏಕೈಕ ಪಕ್ಷವೆಂದರೆ ಅದು ಆಮ್ ಆದ್ಮಿ ಪಕ್ಷಕ್ಕೆ ಮಾತ್ರ ಎಂದರು.
ಮುಂಬರುವ ಫೆ. 26 ಕ್ಕೆ ದಾವಣಗೆರೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲು ಚಿಂತನೆ ನಡೆದಿದೆ. ಕಾರ್ಯಕ್ರಮಕ್ಕೆ ಕೇಜ್ರಿವಾಲ್ ಬರಲಿದ್ದಾರೆ. ಚುನಾವಣೆ ಪೂರ್ವ ನಾಲ್ಕಾರು ಬಾರಿ ರಾಜ್ಯಕ್ಕೆ ಬರುವ ಆಶ್ವಾಸನೆಯನ್ನು ಕೇಜ್ರಿವಾಲ್ ಕೊಟ್ಟಿದ್ದಾರೆ. ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಅಗತ್ಯ ಯೋಜನೆ ರೂಪಿಸಲಾಗಿದೆ. ಪ್ರಾಮಾಣಿಕರು, ಶುದ್ಧ ಹಸ್ತದವರು ಯಾರೇ ಬಂದರೂ ಅವರನ್ನ ಪಕ್ಷ ಬರಮಾಡಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.
ಕೆಕೆಆರ್‌ಡಿಬಿ ಅಂದ್ರೆ ಕಳ್ಳ ಖದೀಮರ ರಿಜಿನಲ್ ಡೆವಲಪ್ಮೆಂಟ್ ಬೋರ್ಡ್: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವಿರುದ್ದ ಭ್ರಷ್ಟಾಚಾರ, ಲೂಟಿ ಆರೋಪ ಮಾಡಿ ಗುಡುಗಿದ ಮುಖ್ಯಮಂತ್ರಿ ಚಂದ್ರು, ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಅಲ್ಲ, ಇದು ಕಳ್ಳ ಖದೀಮರ ರಿಜಿನಲ್ ಡೆವಲಪ್ಮೆಂಟ್ ಬೋರ್ಡ್ ಎಂದು ಆರೋಪಿಸಿದರು. ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಮೂರು ಸಾವಿರ ಕೋಟಿ ಅನುದಾನ ಬರುತ್ತಿದೆ. ಆದರೆ ಕಾಮಗಾರಿ ಮಾಡದೇ ಬೋಗಸ್ ಬಿಲ್ಗಳನ್ನ ಹಾಕಿ ಅಭಿವೃದ್ಧಿ ಹಣ ನುಂಗಿ ಹಾಕಲಾಗುತ್ತಿದೆ. ಕೆಕೆಆರ್ಡಿಬಿಯ ಭ್ರಷ್ಟಾಚಾರದ ಕುರಿತು ದಾಖಲೆ ಸಮೇತ ಶೀಘ್ರದಲ್ಲಿ ಬಿಡುಗಡೆ ಮಾಡುತ್ತೇವೆಂದು ಹೇಳಿದರು.
ಸಾಹಸ ಸಿಂಹ ವಿಷ್ಣು ಸ್ಮಾರಕ ಸ್ವಾಗತ : ಮೇರು ನಟ ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ಇಂದು ಲೋಕಾರ್ಪಣೆ ಆಗ್ತಿರೋದಕ್ಕೆ ಹಿರಿಯ ನಟರೂ ಆದ ಮುಖ್ಯಮಂತ್ರಿ ಚಂದ್ರು ಸಂತಸ ವ್ಯಕ್ತಪಡಿಸಿದ್ದಾರೆ. ರಾಜ್ಕುಮಾರ್, ವಿಷ್ಣುವರ್ಧನ್ ಸೇರಿ ಎಲ್ಲರ ಜೊತೆ ನಟನೆ ಮಾಡಿದ್ದೇನೆ. ಸ್ಮಾರಕ ತಡವಾದ್ರೂ ಕೂಡ ವಿಷ್ಣುವರ್ಧನ್ ಸ್ಮಾರಕ ಸಿದ್ದಗೊಂಡು ಲೋಕಾರ್ಪಣೆ ಆಗುತ್ತಿರುವುದು ಸಂತೋಷ ತಂದಿದೆ. ಇದು ಕಲಾವಿದನಿಗೆ ಸಂದ ಗೌರವ.
ವಿಷ್ಣುವರ್ಧನ್ ಸ್ಮಾರಕ ಕೇವಲ ಸ್ಮಾರಕ ಆಗಿ ಇರಬಾರದು, ಅದು ಮುಂದಿನ ಭವಿಷ್ಯದ ಪೀಳಿಗೆಗಳಿಗೆ, ವಿಷ್ಣು ಓರ್ವ ಸಾಂಸ್ಕೃತಿಕ ಲೋಕದ ರಾಯಭಾರಿಗಳಾಗಿ ಕೆಲಸ ಮಾಡಿದ್ದಾರೆ ಅನ್ನೋದನ್ನ ತೋರಿಸಿಕೊಡುವಂತೆ ಆಗಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ನಿಟ್ಟಿನಲ್ಲಿ ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಅಂತ ಮುಖ್ಯಮಂತ್ರಿ ಚಂದ್ರು ಮನವಿ ಮಾಡಿದ್ದಾರೆ. ವಿಷ್ಣು ಸ್ಮಾರಕ ಅತ್ಯಂತ ಆಕರ್ಷಣೀಯ ಜನಪ್ರಿಯ ಆಗಲಿ ಎಂದು ಹಾರೈಸಿದರು.
ಇದನ್ನೂ ಓದಿ : ಡಾ. ವಿಷ್ಣುವರ್ಧನ್ ಇಡೀ ಕರುನಾಡು ಮೆಚ್ಚಿದ ಹೃದಯವಂತ: ಸಿಎಂ ಬಸವರಾಜ ಬೊಮ್ಮಾಯಿ