ಕಲಬುರಗಿ : ಕಲ್ಯಾಣ ಕರ್ನಾಟಕದಾದ್ಯಂತ ಎಳ್ಳು ಅಮಾವಾಸ್ಯೆಯ ಸಂಭ್ರಮ ಮನೆ ಮಾಡಿದೆ. ಹೊಲಗಳಲ್ಲಿ ಬೆಳೆದ ವಿವಿಧ ಧಾನ್ಯ, ತರಕಾರಿ ಮಿಶ್ರಣದ ಭಜ್ಜಿ, ಜೋಳದ ಕಡುಬು ಸಿದ್ಧಪಡಿಸಿದ ರೈತರು, ಚರಗ ಚೆಲ್ಲುವ ಮೂಲಕ ಭೂತಾಯಿಗೆ ಗೌರವ ಸಮರ್ಪಿಸಿದರು. ಹೊಲದಲ್ಲಿಯೇ ವೈವಿಧ್ಯಯಮ ಭಕ್ಷ್ಯಗಳನ್ನು ಸಿದ್ಧಪಡಿಸಿ, ಸಹಪಂಕ್ತಿಯಲ್ಲಿ ಕುಳಿತು ಸವಿದು ಸಂಭ್ರಮಿಸಿದರು.
ಎಳ್ಳು ಅಮಾವಾಸ್ಯೆ ಉತ್ತರ ಕರ್ನಾಟಕದ ಪ್ರಸಿದ್ಧ ಹಬ್ಬ. ಎಲ್ಲರ ಜೀವನಾಧಾರ ಎನಿಸಿರುವ ಭೂಮಾತೆಗೆ ಪೂಜೆ ಸಲ್ಲಿಸಲೆಂದು ಈ ಹಬ್ಬವನ್ನು ಶತಶತಮಾನಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ಹಿನ್ನೆಲೆ ಪ್ರತಿ ವರ್ಷದಂತೆ ಈ ವರ್ಷವೂ ಕಲ್ಯಾಣ ಕರ್ನಾಟಕದಾದ್ಯಂತ ಎಳ್ಳು ಅಮಾವಾಸ್ಯೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಸಾಮಾನ್ಯವಾಗಿ ಹೆಣ್ಣು ಗರ್ಭ ಧರಿಸಿದಾಗ ಆಕೆಯ ಅಪೇಕ್ಷೆಗೆ ಅನುಗುಣವಾಗಿ ವೈವಿಧ್ಯಮಯ ಖಾದ್ಯಗಳನ್ನು ಸಿದ್ದಪಡಿಸಿ ಸೀಮಂತ ಕಾರ್ಯಕ್ರಮ ನೆರವೇರಿಸಲಾಗುತ್ತದೆ. ಹೆಣ್ಣಿನಂತೆಯೇ ಭೂ ತಾಯಿಯೂ ಫಲ ಹೊತ್ತು ನಿಂತಾಗ ಆಕೆಗೂ ಸೀಮಂತ ಮಾಡಲೆಂದೇ ಎಳ್ಳು ಅಮಾವಾಸ್ಯೆಯ ದಿನ ವೈವಿಧ್ಯಮಯ ಖಾದ್ಯಗಳನ್ನು ಸಿದ್ಧಪಡಿಸಿ ಚರಗ ಚೆಲ್ಲಲಾಗುತ್ತದೆ.
ಪುಟ್ಟ ಇರುವೆಯಿಂದ ಹಿಡಿದು ಎಲ್ಲ ಪ್ರಾಣಿ, ಪಕ್ಷಿಗಳಿಗೂ ಭೂಮಿ ಸೇರಿದ್ದಾಗಿದೆ. ಎಲ್ಲರೂ ಊಟ ಮಾಡಿದ ಮೇಲೆ ನಾವು ತಿನ್ನಬೇಕೆಂಬ ಪರಿಕಲ್ಪನೆಯೊಂದಿಗೆ ಚರಗ ಚೆಲ್ಲಲಾಗುತ್ತದೆ. ಈ ಮೂಲಕ ಭೂ ತಾಯಿಗೆ ಮೊದಲು ಉಣಿಸಿ ಕೃತಜ್ಞತೆ ಸಲ್ಲಿಸಲಾಗುತ್ತದೆ.
ಒಕ್ಕಲಿಗ ಮುದ್ದಣ್ಣನ ಸ್ಮರಣೆ..
ಎಳ್ಳು ಅಮಾವಾಸ್ಯೆಯ ಅಂಗವಾಗಿ ಕಲಬುರಗಿ ಹೊರವಲಯದಲ್ಲಿ ಒಕ್ಕಲಿಗ ಮುದ್ದಣ್ಣನವರ ಜಯಂತಿಯನ್ನು ವಿಶೇಷವಾಗಿ ಆಚರಿಸಿ ಅವರ ಸ್ಮರಣೆ ಮಾಡಲಾಯಿತು. ಪೂಜೆಯ ನಂತರ ಎಲ್ಲ ಜಾತಿ, ಧರ್ಮೀಯರೂ ಸಾಮೂಹಿಕವಾಗಿ ಪಂಕ್ತಿಯಲ್ಲಿ ಕುಳಿತು ಸಹ ಪಂಕ್ತಿ ಭೋಜನ ಮಾಡಿದರು.