ಕಲಬುರಗಿ: ಹಣ ನೀಡದ ಕಾರಣ ಅಳಿಯನೋರ್ವ ತನ್ನ ಮಾವನನ್ನೆ ಸಿನಿಮಿಯ ರೀತಿಯಲ್ಲಿ ಕೊಂದಿದ್ದಾನೆ.
ಅಬ್ದುಲ್ ರಹೀಂ (63) ಕೊಲೆಯಾದ ವ್ಯಕ್ತಿ. ಈತನ ತಮ್ಮನ ಅಳಿಯನಾದ ಮಕ್ಬೂಲ್ ಸೌದಾಗರ್ ಕೊಲೆ ಮಾಡಿರುವ ಆರೋಪಿ. ಅಬ್ದುಲ್ ರಹೀಂ ಮೇ. 15 ರಂದು ಬೈಕ್ ಮೇಲೆ ಹೋಗುವಾಗ ಹಿಂದಿನಿಂದ ಬೊಲೆರೋ ವಾಹನದಿಂದ ಮಕ್ಬೂಲ್ ಸೌದಾಗರ್ ಡಿಕ್ಕಿ ಹೊಡೆದು ಕೊಲೆ ಮಾಡಿದ್ದಾನೆ. ನಂತರ ಇದೊಂದು ರಸ್ತೆ ಅಪಘಾತ ಎಂಬಂತೆ ಬಿಂಬಿಸಿದ್ದಾನೆ.
ಆರಂಭದಲ್ಲಿ ರಸ್ತೆ ಅಪಘಾತ ಎಂದು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು. ನಂತರ ಮೇ 17 ರಂದು ಕೊಲೆಯಾದ ವ್ಯಕ್ತಿಯ ಮಗ ಮಹಮ್ಮದ್ ಅಜ್ಮೋದ್ದಿನ್, ತನ್ನ ತಂದೆ ಸಾವು ರಸ್ತೆ ಅಪಘಾತದಿಂದ ಅಲ್ಲ, ಉದ್ದೇಶಪೂರ್ವಕ ಕೊಲೆ ಎಂದು ಅನುಮಾನ ವ್ಯಕ್ತಪಡಿಸಿ ಪ್ರಕರಣ ದಾಖಲಿಸಿದ್ದರು.
ಪೊಲೀಸರು ಸಮಗ್ರ ತನಿಖೆ ನಡೆಸಿದಾಗ ಕೊಲೆ ಎಂಬುದು ಬೆಳಕಿಗೆ ಬಂದಿದೆ. ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.ಪ್ರಕರಣವನ್ನು ಸಂಚಾರಿ ಠಾಣೆಯಿಂದ ರೋಜಾ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ಹೆಚ್ಚಿನ ತನಿಖೆ ನಡೆದಿದೆ.