ಕಲಬುರಗಿ: ಕಡು ಬಡತನದಲ್ಲಿ ಜನಿಸಿ, ಮಗುವಿದ್ದಾಗಲೇ ಎಲ್ಲರನ್ನೂ ಕಳೆದುಕೊಂಡು, ಹುಟ್ಟಿನಿಂದ ಹೋರಾಟದ ಹಾದಿಯಲ್ಲಿಯೇ ಬೆಳೆದು ಬಂದ ಡಾ. ಮಲ್ಲಿಕಾರ್ಜುನ ಖರ್ಗೆ ಈಗ ಶತಮಾನದ ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಜೀವನದ ಬಹುತೇಕ ಸಮಯ ಮುಳ್ಳಿನ ಹಾದಿಯಲ್ಲಿ ನಡೆದು ಯಶಸ್ವಿ ಜೀವನದತ್ತ ಬಂದಿರುವ ಖರ್ಗೆ ಕೈಗೆ ಅಧಿಕಾರ ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬೂಸ್ಟರ್ ಡೋಸ್ ನೀಡಲು ಗಾಂಧಿ ಕುಟುಂಬ ಮುಂದಾಗಿದೆ.

ಹೌದು, ದೇಶದ ಅತಿ ಹಳೆಯದಾದ ಮತ್ತು ಅತಿ ದೊಡ್ಡದಾಗ ಕಾಂಗ್ರೆಸ್ ಪಕ್ಷದ ಆಡಳಿತ ಚುಕ್ಕಾಣಿ ಹಿರಿಯ ರಾಜಕೀಯ ಮುತ್ಸದ್ಧಿ ಖರ್ಗೆ ಕೈಗೆ ಸಿಕ್ಕಿದೆ. ದೇಶದ ಅತ್ಯುನ್ನತ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣಾ ಕಣಕ್ಕಿಳಿದು ಭರ್ಜರಿ ಗೆಲುವಿನ ಮೂಲಕ ಎಐಸಿಸಿ ಸಾರಥಿ ಆಗಿ ಆಯ್ಕೆ ಆಗಿದ್ದಾರೆ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಹಿಂದುಳಿದ ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಯ ಹರಿಕಾರ, ಸೋಲಿಲ್ಲದ ಸರದಾರನೆಂಬ ಖ್ಯಾತಿ ಗಳಿಸಿದ್ದ ಖರ್ಗೆ ಅವರ ಹಿಂದಿನ ಜೀವನ ಮಾತ್ರ ಹೂವಿನಿಂದ ಕೂಡಿದ ಮೆತ್ತನೆಯ ಹಾದಿಯಾಗಿರಲಿಲ್ಲ ಅನ್ನೋದು ಗಮನಾರ್ಹ ವಿಷಯ.

ಪುಟ್ಟ ಕಂದಮ್ಮನ ಕರಾಳ ದಿನ: ರಾಜಕೀಯದಲ್ಲಿ ಸೋಲಿಲ್ಲದ ಸರ್ದಾರ ಎಂಬ ಖ್ಯಾತಿ ಪಡೆದ ಮಲ್ಲಿಕಾರ್ಜುನ ಖರ್ಗೆ, ಹುಟ್ಟುತ್ತಲೇ ಸುಖದ ಸುಪ್ಪತ್ತಿಗೆಯಲ್ಲಿ ಇದ್ದವರಲ್ಲ, ಕಡುಬಡತನ ಮನೆಯಲ್ಲಿ ಜನಿಸಿ ಸಾಕಷ್ಟು ನೋವು ನಷ್ಟ ಕಷ್ಟ ಅನುಭವಿಸಿದವರು. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮದ ಕಡು ಬಡತನದ ಮನೆಯಲ್ಲಿ ಜುಲೈ 21,1942 ರಲ್ಲಿ ಜನಿಸಿದ ಖರ್ಗೆ, ಮಗು ಇದ್ದಾಗಲೇ ದುಷ್ಟರ ದುಷ್ಕೃತ್ಯದಿಂದ ತಾಯಿ ಮತ್ತು ಒಡಹುಟ್ಟಿದವರನ್ನು ಕಳೆದುಕೊಂಡು ತಂದೆಯೊಂದಿಗೆ ಕಲಬುರಗಿಗೆ ಒಲಸೆ ಬಂದಿದ್ದಾರೆಂಬ ಕರಾಳ ಇತಿಹಾಸ ಕೆಲವೆಡೆ ಉಲ್ಲೇಖವಿದೆ.

1947 ಆಗಸ್ಟ್ 15 ರಂದು ದೇಶಕ್ಕೆ ಸ್ವಾತಂತ್ರ ಸಿಕ್ಕಿತ್ತು. ಆದರೆ ನಿಜಾಮನ ಕಪಿಮುಷ್ಠಿಯಲ್ಲಿದ್ದ ಹೈದ್ರಾಬಾದ್ ಕರ್ನಾಟಕ ಪ್ರದೇಶ ಒಂದು ವರ್ಷ ತಡವಾಗಿ ಭಾರತದಲ್ಲಿ ವಿಲೀನಗೊಂಡಿತ್ತು. ನಿಜಾಮ ಆಡಳಿತ ಅವಧಿಯಲ್ಲಿ ನಿಜಾಮನ ಖಾಸಗಿ ಸೈನ್ಯ ರಜಾಕಾರರ ಪಡೆ ನಡೆಸಿದ ದಾಳಿ ಅಷ್ಟಿಷ್ಟಲ್ಲ, ಕ್ರೌರ್ಯ ಮನೋಭಾವದ ರಜಾಕರರ ದಾಳಿಯಿಂದ ಈ ಪ್ರದೇಶದಲ್ಲಿ ಅಸಂಖ್ಯಾತ ಜನರು ಪ್ರಾಣ ಕಳೆದುಕೊಂಡರು. ಅದೆಷ್ಟೋ ಜನರು ಎಲ್ಲವನ್ನ ಕಳೆದುಕೊಂಡು ಬೀದಿಗೆ ಬಿದ್ದರು. ಇದೆ ರಜಾಕರ ದಾಳಿ ಸಂದರ್ಭದಲ್ಲಿ ಖರ್ಗೆ ಕುಟುಂಬ ಕೂಡಾ ನಲುಗಿ ಹೋಗಿತ್ತು. ರಜಾಕರ ಪಡೆ ಖರ್ಗೆ ಅವರ ಇಡೀ ಕುಟುಂಬ ಸದಸ್ಯರನ್ನು ಬಲಿ ಪಡೆದಿದೆ ಎಂಬ ಇತಿಹಾಸ ಕೆಲವೆಡೆ ಉಲ್ಲೇಖವಿದೆ.

ಮಲ್ಲಿಕಾರ್ಜುನ ಖರ್ಗೆ ಮಗುವಾಗಿದ್ದಾಗ ವರವಟ್ಟಿ ಗ್ರಾಮದಲ್ಲಿ ರಜಾಕರ ಪಡೆ ದಾಳಿ ನಡೆಸಿತ್ತು. ಕೈಗೆ ಸಿಕ್ಕಸಿಕ್ಕವರ ಹತ್ಯೆಗೈದಿತ್ತು. ಮನೆಗಳಿಗೆ ಬೆಂಕಿ ಹಚ್ಚಿ ಕ್ರೌರ್ಯ ಮೆರೆದಿತ್ತು. ಇದೇ ಸಂದರ್ಭದಲ್ಲಿ ಖರ್ಗೆ ಕುಟುಂಬ ವಾಸವಿದ್ದ ಗುಡಿಸಲಿಗೂ ಕೊಳ್ಳಿ ಇಟ್ಟಿತ್ತು. ಖರ್ಗೆ ತಾಯಿ ಹಾಗೂ ಒಡಹುಟ್ಟಿದವರು ಅದೇ ಬೆಂಕಿಗೆ ಬಲಿಯಾದರು. ಅದೃಷ್ಟಕ್ಕೆ ಗುಡಿಸಿಲಿನಿಂದ ಹೊರಗಿದ್ದ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ತಂದೆ ಮಾಪಣ್ಣ ಬದುಕುಳಿದಿದ್ದರು. ನಂತರ ಖರ್ಗೆ ತಮ್ಮ ತಂದೆಯೊಂದಿಗೆ ಕಲಬುರಗಿಗೆ ವಲಸೆ ಬಂದಿದ್ದರು ಎಂಬ ಕರಾಳ ಇತಿಹಾಸ ಕೆಲವೆಡೆ ಉಲ್ಲೇಖಿಸಲಾಗಿದೆ.

ಹೋರಾಟದ ಹಾದಿಯಲ್ಲಿ ಖರ್ಗೆ: ತಂದೆಯೊಂದಿಗೆ ಹುಟ್ಟೂರು ವರವಟ್ಟಿ ತೊರೆದು ಕಲಬುರಗಿಗೆ ಆಗಮಿಸಿದ ಖರ್ಗೆ, ಕಾಲಕ್ರಮೇಣ ಚೇತರಿಸಿಕೊಂಡು ಎನ್‌ವಿ ಶಾಲೆಯಲ್ಲಿ ಪ್ರಾಥಮಿಕ ಪ್ರೌಢ ಶಿಕ್ಷಣ, ಸರ್ಕಾರಿ ಪದವಿ ಕಾಲೇಜಿನಲ್ಲಿ ಪಿಯು ಆರ್ಟ್, ಶೇಠ್ ಶಂಕರ್ ಲಾಲ್ ಲಾಹೋಟಿ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಕಾಲೇಜಿನಲ್ಲಿ ವಿದ್ಯಾರ್ಥಿ ಮುಖಂಡನಾಗಿ, ತಮ್ಮ ತಂದೆ ಮಾಪಣ್ಣ ಕೆಲಸ ಮಾಡುತ್ತಿದ್ದ ಎಮ್‌ಎಸ್‌ಕೆ ಮಿಲ್‌ನಲ್ಲಿ ಕಾರ್ಮಿಕ ಮುಖಂಡನಾಗಿ ಗುರುತಿಸಿಕೊಂಡು ಅನೇಕ ಹೋರಾಟಗಳನ್ನು ಮಾಡಿ 1969 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಸೋಲಿಲ್ಲದ ಸರ್ಧಾರ ಖ್ಯಾತಿ- ಈಡೇರದ ಸಿಎಂ ಹುದ್ದೆ ಆಸೆ: 1972 ರಲ್ಲಿ ಮೊದಲ ಬಾರಿಗೆ ಗುರುಮಠಕಲ್ ಮೀಸಲು ಮತಕ್ಷೇತ್ರದಿಂದ ವಿಧಾನಸಭೆ ಪ್ರವೇಶ ಮಾಡಿದ ಖರ್ಗೆ 2008 ರವರೆಗೆ ಒಂಬತ್ತು ಬಾರಿ ಸತತವಾಗಿ ಶಾಸಕರಾದವರು. ಈ ಅವಧಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ, ವಿರೋಧ ಪಕ್ಷದ ನಾಯಕರಾಗಿ, ಹಲವು ಉನ್ನತ ಮಟ್ಟದ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇನ್ನು 2009 ಹಾಗೂ 2014 ರಲ್ಲಿ ಎರಡು ಅವಧಿಗೆ ಕಲಬುರಗಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಖರ್ಗೆ ಕೇಂದ್ರ ಮಂತ್ರಿಯಾಗಿ, ಸಂಸದೀಯ ನಾಯಕನಾಗಿ ಕಾರ್ಯನಿರ್ವಹಿಸಿದ್ದಾರೆ.
1972 ರಿಂದ 2019ರ ವರೆಗೆ 9 ಬಾರಿ ಶಾಸಕರಾಗಿ ಎರಡು ಬಾರಿ ಸಂಸದರಾದ ಖರ್ಗೆಗೆ ಮೊದಲ ಬಾರಿಗೆ 2019 ರ ಲೋಕಸಭಾ ಚುನಾವಣೆಯಲ್ಲಿ ಸೋಲಾಯಿತು. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಖರ್ಗೆ ಅವರನ್ನ ರಾಜ್ಯಸಭೆಗೆ ಅವಿರೋಧ ಆಯ್ಕೆ ಮಾಡುವ ಮೂಲಕ ಖರ್ಗೆ ಅವರನ್ನು ಮತ್ತೆ ಮುನ್ನಲೆಗೆ ತಂದಿತ್ತು. ಹೀಗೆ ಸೋಲಿಲ್ಲದ ಸರದಾರ ಎಂಬ ಖ್ಯಾತಿ ಪಡೆದ ಖರ್ಗೆ ಮೂರುಬಾರಿ ಮುಖ್ಯಮಂತ್ರಿ ಗಾಧಿಯ ಹೋಸ್ತಿಲವರೆಗೆ ಹೋಗಿ ವಂಚಿತರಾಗಿ ಮರಳಿದ ಇತಿಹಾಸ ಕೂಡಾ ಇದೆ. 1999, 2004, ಮತ್ತು 2013 ರಲ್ಲಿ ಮೂರುಬಾರಿ ಖರ್ಗೆ ಇನ್ನೇನು ಸಿಎಂ ಆಗಿಯೇ ಬಿಟ್ರು ಎನ್ನುವಷ್ಟರಲ್ಲಿ ರಾಜಕೀಯ ಬದಲಾವಣೆಗಳು ಅವರನ್ನು ಸಿಎಂ ಸ್ಥಾನದಿಂದ ವಂಚಿತರಾಗುವಂತೆ ಮಾಡಿತ್ತು. ಖರ್ಗೆ ಬದಲಾಗಿ ಎಸ್.ಎಂ ಕೃಷ್ಣ, ಎನ್. ಧರ್ಮಸಿಂಗ್, ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಗೇರಿದರು.
ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: 24 ವರ್ಷಗಳ ನಂತರ ಗಾಂಧಿಯೇತರ ಮುಖ್ಯಸ್ಥರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ
ಅದೇನೇ ಇರಲಿ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿನ ಸಮಚಿತ್ತ, ಶಾಂತ, ಸೌಮ್ಯ ಸ್ವಭಾವ, ಹಿತ ಮಿತ, ಅಳೆದು ತೂಗಿ ಮಾತನಾಡುವ ಗುಣಲಕ್ಷಣ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಗಾಂಧಿ ಕುಟುಂಬದ ಆಪ್ತನಾಗಿ ಗುರುತಿಸಿಕೊಂಡ ಪ್ರತಿಫಲವಾಗಿ ಖರ್ಗೆ ಅವರಿಗೆ ಇದೀಗ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಒಲಿದುಬಂದಿದೆ.