ಕಲಬುರಗಿ: ಸಂಪೂರ್ಣ ಹದಗೆಟ್ಟಿರುವ ರಸ್ತೆ, ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಿರುವ ವಾಹನ ಸವಾರರು.. ಇಂತಹ ಒಂದು ಅಪಾಯಕಾರಿ ದೃಶ್ಯ ಕಂಡು ಬಂದಿದ್ದು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ.
ಚಿತ್ತಾಪುರ ತಾಲೂಕಿನ ಬಳವಡಗಿ ಹಾಗೂ ಕೊಂಚೂರ ಎರಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದು. ಕಳೆದ ಮೂರು ನಾಲ್ಕು ವರ್ಷದಿಂದ ಈ ಎರಡು ಗ್ರಾಮದ ಜನ ಇದೆ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಮೂರು ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿ ಜಲ್ಲಿಕಲ್ಲುಗಳು ತೇಲಿವೆ. ಆದರೂ ಇದಕ್ಕೆ ಸಂಬಂಧಿಸಿದ ಜನ ಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಈ ಕಡೆ ಗಮನ ಹರಿಸುತ್ತಿಲ್ಲ. ವಾಹನ ಸವಾರರಂತು ಜೀವ ಕೈಯಲ್ಲಿ ಹಿಡಿದು ತಿರುಗುವಂತಾಗಿದೆ.
"ಹಲವು ವಾಹನ ಸವಾರರು ಬಿದ್ದು ಗಂಭೀರ ಗಾಯಗೊಂಡ ಉದಾಹರಣೆಗಳು ಸಹ ಇವೆ. ರಸ್ತೆಗೆ ಹಾಕಿರುವ ಡಾಂಬರ್ ಕಿತ್ತು ಬರುತ್ತಿದೆ. ಕಳಪೆ ಕಾಮಗಾರಿ ಮಾಡಿದ ಕೆಲ ದಿನಗಳಲ್ಲೆ ರಸ್ತೆ ಸಂಪೂರ್ಣ ಹಳ್ಳಹಿಡಿದಿದೆ. ನಮಗೆ ಸರಿಯಾದ ರಸ್ತೆ ನಿರ್ಮಿಸಿ ಕೊಡಿ ಎಂದು ಹಲವು ಬಾರಿ ಮನವಿ ಮಾಡಿದರೂ ಜಪ್ಪಯ್ಯ ಎನ್ನುತ್ತಿಲ್ಲ ಅಧಿಕಾರಿಗಳು. ಕೇಳಿದಾಗೊಮ್ಮೆ ತ್ಯಾಪೆ ಹಾಕುವ ಕೆಲಸ ನಡೆದಿದೆ ಹೊರತು ಸರಿಯಾದ ರಸ್ತೆ ನಿರ್ಮಿಸುತ್ತಿಲ್ಲ." ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓದಿ :ಸಂಪುಟ ವಿಸ್ತರಣೆ, ಉಪ ಚುನಾವಣಾ ಅಭ್ಯರ್ಥಿ ಆಯ್ಕೆ ಕುರಿತು ವರಿಷ್ಠರ ಜೊತೆ ಚರ್ಚೆ: ಸಿಎಂ