ಕಲಬುರಗಿ: ತೊಗರಿ ಕಣಜ ಕಲಬುರಗಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಗರದ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ 85ನೇ ಸಾಹಿತ್ಯ ಸಮ್ಮೇಳನದ ಅಂಗವಾಗಿ, ಗಣ್ಯರಿಂದ ಧ್ವಜಾರೋಹಣ ಕಾರ್ಯ ನೆರವೇರಿಸಲಾಯಿತು.
ವಿವಿ ಆವರಣದಲ್ಲಿ ಮದುವಣಗಿತ್ತಿಯಂತೆ ಶೃಂಗಾರರಗೊಂಡ ಅಕ್ಷರ ಜಾತ್ರಾ ವೇದಿಕೆ ಎದುರು ಡಿಸಿಎಂ ಗೋವಿಂದ ಕಾರಜೋಳ ರಾಷ್ಟ್ರ ಧ್ವಜಾರೋಹಣ ನೇರವೇರಿಸಿದರು. ಜೊತೆಗೆ ನಾಡಧ್ವಜವನ್ನು ಕಸಾಪ ಅಧ್ಯಕ್ಷ ಮನು ಬಳಿಗಾರ, ಪರಿಷತ್ತಿನ ಧ್ವಜವನ್ನು ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ನೇರವೇರಿಸಿದರು.
ಧ್ವಜಾರೋಹಣ ಬಳಿಕ ಮಾತನಾಡಿದ ಡಿಸಿಎಂ ಗೊವಿಂದ ಕಾರಜೋಳ, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಹುಡುಕುವ ಪರಿಸ್ಥಿತಿ ಬಂದಿದೆ, ಕನ್ನಡ ಭಾಷೆ ತಾಯಿಗೆ ಸಮಾನವಾದದ್ದು. ಕನ್ನಡ ಉಳಿಸಿ ಬೆಳೆಸುವುದು ಜನರಲ್ಲಿ ಕಾಣುತ್ತಿದೆ. ಹಳ್ಳಿ ಪ್ರದೇಶದಲ್ಲಿ ಕನ್ನಡ ಹೆಚ್ಚಾಗಿ ಕಾಣಿಸುತ್ತಿದೆ. ಆದ್ರೆ ಪಟ್ಟಣ ಪ್ರದೇಶದಲ್ಲಿ ಇಂಗ್ಲೀಷ್ ವ್ಯಾಮೋಹ ಜಾಸ್ತಿಯಾಗಿದೆ. ಈ ಕನ್ನಡ ಸಮ್ಮೇಳನದ ಮೂಲಕ ನಾಡಿನ ಜನರಲ್ಲಿ ವಿನಂತಿ ಮಾಡುತ್ತೇನೆ. ಕನ್ನಡ ಉಳಿಸಿ ಬೆಳೆಸುವುದಕ್ಕೆ ನಾಡಿನ ಜನ ಸಜ್ಜಾಗಬೇಕು. ಯಾರೇ ನಮ್ಮ ಜೊತೆ ಬೇರೆ ಭಾಷೆಯಲ್ಲಿ ಮಾತಾಡಿದ್ರು ನಾವು ಕನ್ನಡದಲ್ಲಿ ಮಾತಾಡಬೇಕು ಎಂದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಲ್ಲಿ ಗೋವಿಂದ ಕಾರಜೋಳ ವಿನಂತಿ ಮಾಡಿದರು.
ಕಲ್ಯಾಣ ಕರ್ನಾಟಕದಲ್ಲಿ ನಡೆಯುತ್ತಿರುವ ಈ ಕನ್ನಡ ಸಮ್ಮೇಳನಕ್ಕೆ ಸಹಸ್ರಾರು ಜನ ಹರಿದು ಬಂದಿದ್ದಾರೆ. ಈ ಹಿಂದೆ ನಡೆದಂತಹ ಸಮ್ಮೇಳನಕ್ಕಿಂತ ಈ ಸಮ್ಮೇಳನಕ್ಕೆ ಹೆಚ್ಚಿನ ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಪ್ರತ್ಯೇಕ ರಾಜ್ಯದ ಕೂಗು ವಿಚಾರವಾಗಿಯೂ ಮಾತಾಡಿದ ಡಿಸಿಎಂ ಕಾರಜೋಳ, ಸ್ವಾತಂತ್ರ ಪೂರ್ವದಲ್ಲಿ ಕನ್ನಡ ನಾಡು ಹರಿದು ಹಂಚಿ ಹೋಗಿತ್ತು. ಕನ್ನಡನಾಡನ್ನು ಒಂದುಗೂಡಿಸಲು ನಮ್ಮ ಪೂರ್ವಜರ ಹೋರಾಟ, ತ್ಯಾಗ, ಬಲಿದಾನ ಮಾಡಿದ್ದಾರೆ. ಪೂರ್ವಜರ ಹೋರಾಟದಿಂದ ಕನ್ನಡನಾಡು ಒಂದಾಗಿದೆ. ಕರ್ನಾಟಕ ಪ್ರತ್ಯೇಕ ಮಾಡುವುದಾಗಿ ಅಲ್ಪ ಮನಸ್ಸಿನವರು ಹೇಳುತ್ತಿದ್ದಾರೆ. ಪ್ರತ್ಯೇಕ ರಾಜ್ಯದ ಕೂಗಿಗೆ ಬೆಲೆ ಕೊಡುವ ಅವಶ್ಯಕತೆ ಇಲ್ಲ. ಅಖಂಡ ಕರ್ನಾಟಕ ಒಂದಾಗಿರುತ್ತದೆ ಎಂದು ಹೇಳಿದರು.
ನಂತರ ಮಾತನಾಡಿದ ಸಮ್ಮೇಳನಾಧ್ಯಕ್ಷ ಹೆಚ್.ಎಸ್.ವೆಂಕಟೇಶ ಮೂರ್ತಿ, ಇಂತಹ ಮಹಾ ಸಮ್ಮೇಳನದ ಮೂಲಕ ನಾಡು, ನುಡಿ ಮತ್ತು ಕನ್ನಡ ಸಾಹಿತ್ಯದ ಬಗ್ಗೆ ಬೆಳಕು ಚೆಲ್ಲುವಂತಾಗುತ್ತದೆ. ಅಲ್ಲದೆ ಕನ್ನಡಿಗರಲ್ಲಿ ಕನ್ನಡಾಭಿಮಾನ ಹೆಚ್ಚಿಸುತ್ತದೆ, ಆದ್ದರಿಂದ ನಾಡಿನ ಜನತೆ ಈ ಅಕ್ಷರ ಜಾತ್ರೆಗೆ ಸಂಪೂರ್ಣ ಸಹಕಾರ ನೀಡುವಂತೆ ಕೋರಿದರು.