ಕಲಬುರಗಿ: ಜಿಲ್ಲೆಯಲ್ಲಿ 700 ಗ್ರಾಮಗಳು ಕೊರೊನಾ ಮುಕ್ತವಾಗಿವೆ. ಕೊರೊನಾ ಸೋಂಕಿತರ ಪ್ರಮಾಣದಲ್ಲಿ ರಾಜ್ಯದಲ್ಲಿ ಕಲಬುರಗಿ ಜಿಲ್ಲೆ 30ನೇ ಸ್ಥಾನದಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಸಂಸದರು, ಶಾಸಕರು, ಜಿಲ್ಲಾಡಳಿತದ ಪ್ರಯತ್ನ ಮತ್ತು ಸಾರ್ವಜನಿಕರ ಸಹಕಾರದಿಂದ ಸೋಂಕಿತರ ಪ್ರಮಾಣ ಎರಡಂಕಿಗೆ ಇಳಿದಿದೆ. ವೈದ್ಯ ಸಿಬ್ಬಂದಿ ದೇವರಂತೆ ಕೋವಿಡ್ ಸಂದರ್ಭದಲ್ಲಿ ಬಹಳಷ್ಟು ಒಳ್ಳೆ ಕೆಲಸ ಮಾಡಿದ್ದಾರೆ. ವೈದ್ಯರ ಬಗ್ಗೆ ಯಾರೇ ಏನೇ ಆಪಾದನೆ ಮಾಡಿದ್ರು, ವೈದ್ಯರು ಒಳ್ಳೆಯ ಕೆಲಸದಿಂದ ಹಿಂದೆ ಸರಿದಿಲ್ಲ. ವೈದ್ಯ, ಸಿಬ್ಬಂದಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ ಎಂದರು.
ಶಾಹಬಾದ್ ಇಎಸ್‌ಐಸಿ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೇಂಟರ್ ಆಗಿ ಮಾಡಲಾಗಿದೆ. ಅಂದಾಜು 12 ಕೋಟಿ ರೂ. ವೆಚ್ಚದಲ್ಲಿ ಶಾಹಬಾದ್ ಇಎಸ್‌ಐ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಲಾಗ್ತಿದೆ. ಕೋವಿಡ್‌ಗೆ ಸಂಬಂಧಿಸಿದಂತೆ ಉಪಕರಣಗಳನ್ನು ಖರೀದಿಸಲು ಸಾಕಷ್ಟು ಹಣವಿದೆ ಎಂದರು.
ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಕ್ರಮ: ಜಿಲ್ಲೆಯಲ್ಲಿ ಖನಿಜ ಸಂಪತ್ತು ಬಹಳಷ್ಟಿದೆ. 'ಉದ್ಯಮಿಯಾಗು-ಉದ್ಯೋಗ ನೀಡು' ಎಂಬ ನಾಣ್ಣುಡಿಯಂತೆ ಕೈಗಾರಿಕೆಗಳನ್ನ ಅಭಿವೃದ್ಧಿಪಡಿಸಲಾಗುವುದು. 26 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಜಿಲ್ಲೆಯಲ್ಲಿ ಹೊಸ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದಿಂದ ಸ್ಪಂದನೆ ಸಿಗುತ್ತಿದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.