ಕಲಬುರಗಿ: ಕೋವಿಡ್ ಹಿನ್ನೆಲೆ ಸಾರ್ವಜನಿಕ ಗಣೇಶೋತ್ಸವಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರ ಹಲವು ನಿಯಮಾವಳಿಗಳನ್ನು ಜಾರಿ ಮಾಡಿವೆ. ಕಲಬುರಗಿ ನಗರದ 12 ಕಡೆಗಳಲ್ಲಿ ಮೊಬೈಲ್ ಟ್ಯಾಂಕ್ ಮೂಲಕ ಗಣೇಶ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ.
ಈಗಾಗಲೇ ಸಾಕಷ್ಟು ಬಿಗಿ ಕ್ರಮಗಳೊಂದಿಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗುತ್ತಿದೆ. ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಮಹಾನಗರ ಪಾಲಿಕೆಯಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು. ಮನರಂಜನೆ ಕಾರ್ಯಕ್ರಮ, ಮೆರವಣಿಗೆ ಮಾಡುವಂತಿಲ್ಲ. ಪಾರಂಪರಿಕ ಗಣೇಶ ಮೂರ್ತಿ ಮತ್ತು ಮನೆಯಲ್ಲಿ ಪ್ರತಿಷ್ಠಾಪಿಸಿದ ವಿಗ್ರಹಗಳನ್ನು ತಮ್ಮ ಮನೆಯಲ್ಲಿಯೇ ವಿಸರ್ಜಿಸಬೇಕು. ಹೀಗೆ ಹತ್ತು ಹಲವು ಕಟ್ಟುನಿಟ್ಟಿನ ಕ್ರಮದೊಂದಿಗೆ ಅನುಮತಿ ನೀಡಲಾಗುತ್ತಿದೆ.
ಇದೀಗ ಗಣೇಶ ಮೂರ್ತಿ ವಿಸರ್ಜನೆಗೂ ಮಹಾನಗರ ಪಾಲಿಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ನಗರದ ಅಯ್ಯರ್ ವಾಡಿ, ಶಹಾಬಜಾರ್ ನಾಕಾ, ಆಳಂದ ಚೆಕ್ ಪೋಸ್ಟ್, ರಾಜಾಪುರ ಆರ್‌ಟಿಒ ಕ್ರಾಸ್, ಎಂಜಿ ರಸ್ತೆ, ಪುಟಾಣಿ ಗಲ್ಲಿ ಹಾಗೂ ಕೋರಂಟಿ ಹನುಮಾನ್ ದೇವಸ್ಥಾನ ಸ್ಥಳಗಳಲ್ಲಿ ಮೊಬೈಲ್ ಟ್ಯಾಂಕ್ ವ್ಯವಸ್ಥೆ ಮಾಡುವ ಮೂಲಕ ಜನಸಂದಣಿ ತಪ್ಪಿಸಲು ಪಾಲಿಕೆ ಯೋಜನೆ ರೂಪಿಸಿದೆ.
ಅಲ್ಲದೆ ಮೊಬೈಲ್ ಟ್ಯಾಂಕ್ನಲ್ಲಿಯೇ ಸುತ್ತಮುತ್ತಲಿನ ಜನರು ಗಣೇಶ ಮೂರ್ತಿ ವಿಸರ್ಜನೆ ಮಾಡಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರು ಆದೇಶಿಸಿದ್ದಾರೆ.