ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಮುಂದುವರಿದಿದೆ. ಇಂದು ಮತ್ತೆ 10 ಜನರಿಗೆ ಕೊರೊನಾ ಸೋಂಕು ತಗುಲಿರುವದು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದೆ.
ಮಹಾರಾಷ್ಟ್ರದ ಮುಂಬೈನಿಂದ ಬಂದಿದ್ದ ಆರು ಜನ ವಲಸಿಗರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇವರಲ್ಲಿ ಮೂವರು ಮಕ್ಕಳಿದ್ದಾರೆ. 10, 13 ಹಾಗೂ 7 ವರ್ಷದ ಮೂವರು ಬಾಲಕರಿಗೆ ಕೊರೊನಾ ಸೋಂಕು ಇರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ. ಮಕ್ಕಳು ತಮ್ಮ ಪಾಲಕರೊಂದಿಗೆ ಮುಂಬೈನಿಂದ ಆಗಮಿಸಿ ಕ್ವಾರಂಟೈನ್ ಕೇಂದ್ರದಲ್ಲಿದ್ದರು. ಇವರ ಪಾಲಕರಾದ 55 ವರ್ಷದ, 36 ವರ್ಷದ, 40 ವರ್ಷದ ಮೂವರು ಪುರುಷರಿಗೆ ಕೊರೊನಾ ತಗುಲಿದೆ.
ಪಿ. 927ರ ಮೋಮಿನಪೂರ ನಿವಾಸಿ ಜೊತೆ ಸಂಪರ್ಕದಲ್ಲಿದ್ದ 55 ವರ್ಷದ ವ್ಯಕ್ತಿ ಹಾಗೂ 50 ವರ್ಷದ ಮಹಿಳೆಗೆ ಕೊರೊನಾ ಸೊಂಕು ತಗುಲಿದೆ. 35 ವರ್ಷದ ಮಹಿಳೆ ಹಾಗೂ 55 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಇವರ ಟ್ರಾವೆಲ್ ಹಿಸ್ಟರಿ ಜಿಲ್ಲಾಡಳಿತ ಪತ್ತೆ ಮಾಡುತ್ತಿದೆ.
ಒಟ್ಟು ಇಂದು ಒಂದೇ ದಿನ 10 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 104 ಕ್ಕೆ ಏರಿಕೆಯಾಗಿದೆ. ಭಾನುವಾರ ಕೊರೊನಾ ಬಾರಿ ಶಾಕ್ ನೀಡಿದ್ದು, ಜಿಲ್ಲೆಯ ಜನರು ಮತ್ತಷ್ಟು ಆತಂಕ ಎದುರಿಸುವಂತಾಗಿದೆ.