ಹಾವೇರಿ: ಸಚಿವ ಸಂಪುಟದಲ್ಲಿ ಯಾದವ ಸಮುದಾಯಕ್ಕೆ ಸ್ಥಾನ ನೀಡಿಲ್ಲ ಎಂದು ಹಾವೇರಿ ಜಿಲ್ಲಾ ಯಾದವ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
ಹಾವೇರಿ ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಸಿ.ಎಂ. ತಂಗೋಡರ್ ಮಾತನಾಡಿ, ರಾಜ್ಯದಲ್ಲಿ 25 ಲಕ್ಷಕ್ಕೂ ಅಧಿಕ ಜನಸಂಖ್ಯೆಯ ಗೊಲ್ಲರಿದ್ದಾರೆ. ಸಮುದಾಯದ ಏಕೈಕ ಶಾಸಕಿ ಪೂರ್ಣಿಮಾ ಶ್ರೀನಿವಾಸ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು. ಅವರನ್ನು ಸಂಪುಟದಿಂದ ಕೈ ಬಿಟ್ಟಿದ್ದು ರಾಜ್ಯದ ಗೊಲ್ಲರ ಸಮಾಜದ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಂಗೋಡರ್ ಹೇಳಿದರು.
ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಪೂರ್ಣಿಮಾ ಅವರಿಗೆ ಸಚಿವೆ ಸ್ಥಾನ ನೀಡಬೇಕು ಎಂದು ಸಂಘ ಒತ್ತಾಯಿಸಿದೆ. ಈ ಕುರಿತಂತೆ ಪ್ರತಿಭಟನೆ ಆಯೋಜಿಸಲಾಗಿತ್ತು, ಆದರೆ ಕೋವಿಡ್ ನಿಯಮಗಳು ಜಾರಿ ಇರುವ ಕಾರಣ ಪ್ರತಿಭಟನೆ ಮಾಡುತ್ತಿಲ್ಲ. ಈ ಕುರಿತಂತೆ ರಾಜ್ಯದ ಅಧ್ಯಕ್ಷರು ಸಭೆ ಕರೆದಿದ್ದು, ಸಭೆಯಲ್ಲಿ ತಗೆದುಕೊಂಡ ನಿರ್ಣಯಗಳಂತೆ ಮುಂದಿನ ಹೋರಾಟದ ರೂಪರೇಷೆ ಕುರಿತು ನಿರ್ಧರಿಸಲಾಗುವುದು ಎಂದು ತಂಗೋಡರ್ ತಿಳಿಸಿದರು.
ಇದನ್ನೂ ಓದಿ: ಐಕ್ಯ ಫೌಂಡೇಶನ್‌ನಿಂದ 50 ಸಾವಿರ ಬೀಜದುಂಡೆ ತಯಾರಿ; ಸಸ್ಯ ಸಂಪತ್ತು ವೃದ್ಧಿಗೆ ಮಹತ್ವದ ಕೆಲಸ
ಇದೇ 15 ರಂದು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ಶಾಸಕಿ ಪೂರ್ಣಿಮಾಗೆ ಸಚಿವ ಸ್ಥಾನ ಸಿಗುವವರೆಗೆ ನಾವು ಹೋರಾಟ ಮಾಡುತ್ತೇವೆ. ಶಾಸಕಿ ಪೂರ್ಣಿಮಾಗೆ ಸಚಿವೆ ಸ್ಥಾನ ಸಿಗದಿದ್ದರೆ ಸಿಎಂ ಮನೆ ಮುಂದೆ ಗೊಲ್ಲ ಸಮುದಾಯ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಿದೆ ಎಂದು ತಂಗೋಡಲ್ ಎಚ್ಚರಿಕೆ ನೀಡಿದರು.