ಹಾವೇರಿ: ವಿನಾಕಾರಣ ಗರ್ಭಕೋಶ ಶಸ್ತ್ರಚಿಕಿತ್ಸೆಗೊಳಗಾದ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ವಿವಿಧ ಗ್ರಾಮಗಳ ಮಹಿಳೆಯರು, ಸರ್ಕಾರ ತಮಗೆ ಪ್ರತ್ಯೇಕ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಇಂದು ಪ್ರತಿಭಟನೆ ನಡೆಸಿದರು. ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳೆದ 8 ವರ್ಷಗಳಿಂದ ಈ ಕುರಿತಂತೆ ಹೋರಾಟ ಮಾಡುತ್ತಿದ್ದೇವೆ. ಆದರೆ ಸರ್ಕಾರದಿಂದ ಭರವಸೆ ನೀಡಿದ್ದು ಬಿಟ್ಟರೆ, ಪರಿಹಾರ ಘೋಷಣೆಯಾಗಿಲ್ಲ ಎಂದು ಆರೋಪಿಸಿದರು.
ರಾಣೆಬೆನ್ನೂರು ತಾಲೂಕು ಆಸ್ಪತ್ರೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಪಿ.ಶಾಂತಾ ಎಂಬ ವೈದ್ಯೆ ಮಹಿಳೆಯರು ಯಾವುದೇ ಸಮಸ್ಯೆ ಇದ್ದರೂ ಗರ್ಭಕೋಶ ಕತ್ತರಿಸಬೇಕು ಎಂದು ಸಲಹೆ ನೀಡುತ್ತಿದ್ದರು. ಇದೇ ರೀತಿ ಅವಶ್ಯಕತೆ ಇಲ್ಲದ 1,722 ಮಹಿಳೆಯರಿಗೆ ಗರ್ಭಕೋಶ ಶಸ್ತ್ರಚಿಕಿತ್ಸೆ ನಡೆಸಿದ್ದರು. ಡಾ.ಪಿ.ಶಾಂತಾ ಮದುವೆಯಾಗದ ಯುವತಿಯರ ಗರ್ಭಕೋಶ ತೆಗೆದಿದ್ದರು. ಪಿ.ಶಾಂತಾ ಮತ್ತು ಖಾಸಗಿ ಮೆಡಿಕಲ್ ಶಾಪ್ ಸೇರಿ ಮಹಿಳೆಯರಿಗೆ ವಂಚನೆ ಮಾಡಿದ್ದರು ಎಂಬ ಪ್ರತಿಭಟನಾನಿರತರು ದೂರಿದರು.
ಶಾಂತಾ ಅವರು ಮಾಡಿದ ಶಸ್ತ್ರಚಿಕಿತ್ಸೆಯಿಂದ ತಾತ್ಕಾಲಿಕವಾಗಿ ಆರೋಗ್ಯ ಸುಧಾರಣೆ ಕಂಡ ಮಹಿಳೆಯರು ನಂತರ ಹಲವು ಸಮಸ್ಯೆಗಳಿಗೆ ಒಳಗಾಗಿದ್ದರು. ಈ ಕುರಿತಂತೆ ಬೇರೆ ವೈದ್ಯರ ಹತ್ತಿರ ತೋರಿಸಿದಾಗ ಶಾಂತಾ ಅನಾವಶ್ಯಕವಾಗಿ ಮಹಿಳೆಯರ ಗರ್ಭಕೋಶ ತೆಗೆದು ಹಾಕಿರುವ ಅಂಶ ಬೆಳಕಿಗೆ ಬಂದಿತ್ತು. ಅಂದಿನಿಂದ ಗರ್ಭಕೋಶ ಶಸ್ತ್ರಚಿಕಿತ್ಸೆಗೊಳಗಾದ ಮಹಿಳೆಯರು ಹೋರಾಟದ ಹಾದಿ ಹಿಡಿದಿದ್ದರು.
ಈ ಹಿಂದೆ ಮಹಿಳೆಯರು ರಾಣೆಬೆನ್ನೂರು ನಗರದಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರ ಶಿಗ್ಗಾಂವಿ ನಿವಾಸದವರೆಗೆ ಪಾದಯಾತ್ರೆ ಕೈಗೊಂಡಿದ್ದರು. ಆಗ ಅಧಿಕಾರಿಗಳು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಸುವುದಾಗಿ ಹೇಳಿ ಮಹಿಳೆಯರ ಮನವೊಲಿಸಿದ್ದರು. ಈ ಮೂಲಕ ಪಾದಯಾತ್ರೆಯನ್ನು ಅರ್ಧಕ್ಕೆ ತಡೆದಿದ್ದರು. ಬಳಿಕ ಮಹಿಳೆಯರಿಗೆ ಅಂದಿನ ಸಿಎಂ ಬೊಮ್ಮಾಯಿ ವಿಶೇಷ ಪ್ಯಾಕೇಜ್ ನೀಡುವ ಭರವಸೆ ನೀಡಿದ್ದರು.
ಆದರೆ ಬೊಮ್ಮಾಯಿ ಭರವಸೆ ಭರವಸೆಯಾಗಿಯೇ ಉಳಿದಿದೆ. ಇದೀಗ ಈ ಮಹಿಳೆಯರು ಮತ್ತೆ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಸರ್ಕಾರದ ದಿವ್ಯನಿರ್ಲಕ್ಷ್ಯ ಖಂಡಿಸಿ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಮಹಿಳೆಯರು ತಮಗಾದ ಅನ್ಯಾಯ ಮತ್ಯಾವ ಮಹಿಳೆಯರಿಗೂ ಆಗುವುದು ಬೇಡ. ನಮಗೆ ಅನ್ಯಾಯವಾದಾಗಿನಿಂದ ಹಲವು ರೀತಿಯ ಪ್ರತಿಭಟನೆ ನಡೆಸಿದರೂ ಸಹ ಸರ್ಕಾರಗಳು ತಮ್ಮ ಕಡೆ ತಿರುಗಿ ನೋಡುತ್ತಿಲ್ಲ ಎಂದು ಆರೋಪಿಸಿದರು. ಈ ಸರ್ಕಾರವಾದರೂ ತಮಗೆ ವಿಶೇಷ ಪ್ಯಾಕೇಜ್ ನೀಡಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದವು.
ಇದನ್ನೂ ಓದಿ: ದಾವಣಗೆರೆ: ನೆಚ್ಚಿನ ಶಿಕ್ಷಕರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ