ಹಾವೇರಿ: ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತಗಳು ಸಿಗುತ್ತವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದಲ್ಲಿ ರೋಡ್ ಶೋ ನಡೆಸಿ ಅವರು ಮಾತನಾಡಿದ ಅವರು, ಕ್ಷೇತ್ರದ ಜನ ಅಭಿವೃದ್ಧಿಗೆ ಮತ ಹಾಕಲಿದ್ದಾರೆ ಎಂದು ತಿಳಿಸಿದರು.
ಇದೊಂದು ಮಹತ್ವದ ಚುನಾವಣೆ ಆಗಿದೆ. ನಾನು ನನ್ನ ಕ್ಷೇತ್ರದಲ್ಲಿ ಹೆಚ್ಚಿನ ಸಮಯವನ್ನು ಕೊಡಲು ಸಾಧ್ಯವಾಗಿಲ್ಲ, ದಯವಿಟ್ಟು ಕ್ಷಮಿಸಿ. ಆದರೆ ಇಲ್ಲಿ ಆಗಬೇಕಿರುವ ಎಲ್ಲಾ ಕೆಲಸಗಳನ್ನು ಸಂಪೂರ್ಣ ಇಚ್ಛೆಯಿಂದ ನಿಗಾವಹಿಸಿ ಮಾಡಿದ್ದೇನೆ ಎಂದು ಹೇಳಲು ಇಚ್ಛಿಸುತ್ತೇನೆ. ತಡಸ ಗ್ರಾಮದಲ್ಲಿ ಏನೆಲ್ಲಾ ಅಭಿವೃದ್ಧಿ ಮಾಡಿದ್ದೇವೆ ಎಂಬುದನ್ನು ಪಾಂಪ್ಲೆಟ್ನಲ್ಲಿ ಪೂರ್ಣಪ್ರಮಾಣದಲ್ಲಿ ಪ್ರಿಂಟ್ ಮಾಡಿ ಹಂಚಿದ್ದೇವೆ. ನನಗೆ ಆಶ್ಚರ್ಯವಾಗುತ್ತಿದೆ. ಇಲ್ಲಿ ಇಷ್ಟೊಂದು ಕೆಲಸವಾಗಿದೆಯಾ ಅಂತ. ಬಹುತೇಕ ಎಲ್ಲಾ ರಸ್ತೆಗಳಿಗೂ ಅನುದಾನವನ್ನು ಕೊಟ್ಟಿದ್ದೇನೆ. ನಮ್ಮ ಮುಂಡುಗೋಡು ರಸ್ತೆ ಇರಬಹುದು, ಕಲಘಡಕಿ ರಸ್ತೆ ಇರಬಹುದು ಎಲ್ಲದ್ದಕ್ಕೂ ಅನುದಾನವನ್ನು ಕೊಟ್ಟಿದ್ದೇವೆ. ಎಲ್ಲಾ ಶಾಲೆಗಳ ಕೊಠಡಿಗೆ ಅನುದಾನವನ್ನು ಕೊಟ್ಟಿದ್ದೇನೆ. ಕನ್ನಡ ಶಾಲೆ, ಕನ್ನಡ ಪ್ರಾಥಮಿಕ ಶಾಲೆ ಮತ್ತು ಎಲ್ಲಾ ಉರ್ದು ಶಾಲೆಗಳಿಗೆ ಅನುದಾನವನ್ನು ಕೊಟ್ಟಿದ್ದೇನೆ ಎಂದು ಸಿಎಂ ಹೇಳಿದರು.
ಮನೆಮನೆಗೆ ಗಂಗೆ ಯೋಜನೆ: ಮತ್ತು ಬಹುಕಾಲದ ಬೇಡಿಕೆಯಾದ ದೇವಸ್ಥಾನಗಳು ಹಾಗೂ ಗರಡಿಮನೆ ಸೇರಿದಂತೆ ನಮ್ಮ ತಡಸ ಗ್ರಾಮಕ್ಕೆ ಬೇಕಿರುವ ಬಸದಿಗಳಿಗೆ ಹೆಚ್ಚುವರಿಯಾಗಿ ಅನುದಾನವನ್ನು ಕೊಟ್ಟಿದ್ದೇನೆ. ಮತ್ತು ಇಲ್ಲಿರುವ ಎಲ್ಲಾ ಮಸೀದಿಗಳಿಗೂ ಕೂಡಾ ನಾನು ಅನುದಾನ ಕೊಟ್ಟಿದ್ದೇನೆ. ಇಮಾಮಿ ಹಸನ್ ಮಸೀದಿಗೆ ಶಾದಿ ಮಹಲ್ಗೆ 20 ಲಕ್ಷವನ್ನು ಕೊಟ್ಟಿದ್ದೇನೆ. ಮತ್ತು ಗ್ರಾಮ ದೇವತೆಗೆ 50 ಲಕ್ಷವನ್ನು ಕೊಟ್ಟಿದ್ದೇನೆ. ವ್ಯವಸಾಯ ಸರ್ಕಾರಿ ಸಂಘಕ್ಕೆ 20 ಲಕ್ಷವನ್ನು ಕೊಟ್ಟಿದ್ದೇನೆ. ತಡಸ ಬಯಲ್ಗಂಗೇರಿ ಸಿರ್ಸಿ ರಸ್ತೆ ಅಭಿವೃದ್ಧಿಗೆ ಹಣ ಕೊಟ್ಟಿದ್ದೇನೆ. ಗಾಯತ್ರಿ ಮಠಕ್ಕೆ ಕೊಟ್ಟಿದ್ದೇವೆ. ಮುಂಡುಗೋಡು ರಸ್ತೆಗೆ ಒಂದು ಕೋಟಿ ರೂ. ಗಳನ್ನು ಕೊಟ್ಟಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ಮನೆಮನೆಗೆ ಗಂಗೆ ಯೋಜನೆ ಹಾಗೂ ನಳದಲ್ಲಿ ನೀರು ಕೊಡುವ ವ್ಯವಸ್ಥೆಗೆ ಮೊನ್ನೆ ಅಡಿಗಲ್ಲು ಹಾಕಿದ್ದೆ. ಈಗಾಗಲೇ ಈ ಕೆಲಸ ಪ್ರಾರಂಭವಾಗಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸುನಾಮಿ ಎದ್ದಿದೆ: ಈ ಬಾರಿ 25 ಸಾವಿರ ಮತಗಳ ಅಂತರಗಳಿಂದ ಗೆಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ಸಿಎಂ ಕರೆ ನೀಡಿದರು. ನಿಮ್ಮ ಸೇವೆ ಮಾಡುತ್ತೇನೆ. ನಾಡಿಗೆ ಸಿಎಂ ಆಗಿದ್ದರೂ ನಾನು ನಿಮ್ಮ ಬಸವರಾಜ ಬೊಮ್ಮಾಯಿ. ನೀವೆಲ್ಲರೂ ಅಭಿಮಾನ ಪಡುವಂತೆ ಅಧಿಕಾರ ಮಾಡಿದ್ದೇನೆ. ಎಲ್ಲಾ ವರ್ಗದ ಜನರು ಪ್ರೀತಿಯನ್ನ ತೋರಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸುನಾಮಿ ಎದ್ದಿದೆ. ಏ 29 ಕ್ಕೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಮೋದಿ ಬಂದ ನಂತರ 150 ಸೀಟು ಗೆಲ್ಲುವ ವಾತಾವರಣ ನಿರ್ಮಾಣವಾಗುತ್ತೆ ಎಂದು ಬೊಮ್ಮಾಯಿ ಹೇಳಿದ್ರು.
13 ಕ್ಕೆ ವಿಜಯೋತ್ಸವ ಮಾಡೋಣ. ಆಡಳಿತದಲ್ಲಿ ಭೇದಭಾವ ಮಾಡಿಲ್ಲ. ಕಾಂಗ್ರೆಸ್ ನವರು ಅಧಿಕಾರದಲ್ಲಿ ಇದ್ದಿದ್ದರೆ ಇಷ್ಟು ಅಭಿವೃದ್ಧಿ ಆಗುತ್ತಿತ್ತಾ? ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಎಂಬುದು ಚುನಾವಣೆ ಮುಗಿದ ನಂತರ ಗಳಘಂಟೆ. ಸುಮ್ಮನೆ ಬೋಗಸ್ ಹೇಳುತ್ತಾರೆ ಎಂದರು.
ಗ್ರಾಮದ ಯುವಕರು ಗ್ರಾಮಕ್ಕೆ ಏನು ಬೇಕು ಅಂತಾ ಪಟ್ಟಿ ಕೊಟ್ಟಿದ್ದಾರೆ. ಒಂದು ವರ್ಷದಲ್ಲಿ ಆ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ ನಾನು ಓಡಾಡಿದ್ದೇನೆ. ಮುಖ್ಯಮಂತ್ರಿ ಕ್ಷೇತ್ರ ಎಂದು ರಾಜ್ಯದ ಜನರು ನೋಡುತ್ತಿದ್ದಾರೆ. ನಿಮ್ಮ ಬಸವರಾಜ ಬೊಮ್ಮಾಯಿ ಅಂತಾ ತಿಳಿದು ಮತ ಹಾಕಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.
ಇದನ್ನೂ ಓದಿ : ಹು-ಧಾ ಮಹಾನಗರ ಪಾಲಿಕೆ ಮಾಜಿ ಮೇಯರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ