ಹಾವೇರಿ: ಬೇಸಿಗೆ ಕಾಲ ಬಂದರೆ ಸಾಕು ಕಾಡುಪ್ರಾಣಿಗಳು ನೀರಿಲ್ಲದೆ ನಾಡಿನತ್ತ ಮುಖಮಾಡುತ್ತವೆ. ಇವುಗಳಲ್ಲಿ ಕೆಲವು ಮತ್ತೆ ಕಾಡು ಸೇರಿದರೆ ಮತ್ತೆ ಕೆಲವು ನಾಯಿಗಳಿಗೋ ಅಪಘಾತಕ್ಕೋ ಬಲಿಯಾಗುತ್ತಿವೆ. ಇದಕ್ಕಾಗಿ ಜಿಲ್ಲೆಯ ಹಾನಗಲ್ ಅರಣ್ಯ ಇಲಾಖೆ ಉಪಾಯ ಕಂಡುಕೊಂಡಿದೆ.
ಹೌದು, ತಾಲೂಕಿನ ವಿವಿಧಡೆ ವ್ಯಾಪಿಸಿರುವ ಸಾವಿರಾರು ಎಕರೆ ಪ್ರದೇಶದ ಅರಣ್ಯದಲ್ಲಿರುವ ಪ್ರಾಣಿಗಳ ನೆರವಿಗೆ ಅರಣ್ಯ ಇಲಾಖೆ ಮುಂದಾಗಿದೆ. ಅರಣ್ಯಪ್ರದೇಶದಲ್ಲಿ ಸಿಮೆಂಟಿನ ಗುಂಡಿಗಳನ್ನು ನಿರ್ಮಿಸಿ ಅದಕ್ಕೆ ಟ್ಯಾಂಕರ್ ಮೂಲಕ ನೀರು ತುಂಬಿಸುತ್ತಿದೆ ಇದು ಪ್ರಾಣಿಗಳಿಗೆ ಸಹಕಾರಿಯಾಗುತ್ತಿದೆ.
ತಾಲೂಕು ಅರಣ್ಯಾಧಿಕಾರಿ ಪರಮೇಶಪ್ಪ ತಾಲೂಕಿನ ಸುಮಾರು 6 ಕಡೆಗಳಲ್ಲಿ ಈ ರೀತಿಯ ನೀರಿನ ಗುಂಡಿಗಳನ್ನು ನಿರ್ಮಿಸಿದ್ದು, ಇಲ್ಲಿಯ ಕಾಡು ಪ್ರಾಣಿಗಳು ನೀರಿಗಾಗಿ ನಾಡಿಗೆ ಬರುವುದು ಕಡಿಮೆಯಾಗಿದೆ. ವಾರಕ್ಕೊಮ್ಮೆ ಗುಂಡಿಗಳನ್ನು ಶುಚಿಗೊಳಿಸುವ ಅರಣ್ಯ ಸಿಬ್ಬಂದಿ ಹೊಸದಾಗಿ ನೀರು ತುಂಬಿಸುತ್ತಾರೆ.
ಇದರಿಂದ ನೀರಿಗಾಗಿ ನಾಡಿಗೆ ಬರುತ್ತಿದ್ದ ಜಿಂಕೆಗಳು, ಮಂಗಗಳು, ಕಾಡುಹಂದಿಗಳು, ತೋಳ ಹಾಗೂ ನರಿಗಳು ಇದೀಗ ಈ ಗುಂಡಿಯಲ್ಲಿ ನೀರು ಕುಡಿಯುತ್ತಿವೆ. ಅರಣ್ಯ ಇಲಾಖೆಯ ಈ ಕಾರ್ಯ ಪರಿಸರ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ಉಳಿದ ಅರಣ್ಯಾಧಿಕಾರಿಗಳು ಸಹ ಈ ರೀತಿ ಕಾಡಿನಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ ಕಾಡು ಪ್ರಾಣಿಗಳು ನಾಡಿಗೆ ಬರುವುದು ತಪ್ಪುತ್ತೆ ಎನ್ನುತ್ತಾರೆ ಪರಿಸರ ಪ್ರೇಮಿಗಳು.