ಹಾವೇರಿ: ಉಕ್ರೇನ್ನಲ್ಲಿ ಬಾಂಬ್ ದಾಳಿಯಿಂದ ಮೃತಪಟ್ಟ ವಿದ್ಯಾರ್ಥಿ ನವೀನ್ ನಿವಾಸಕ್ಕೆ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ನವೀನ್ ಮನೆಗೆ ಭೇಟಿ ನೀಡಿದ ಶ್ರೀಗಳು, ಮಠದ ವತಿಯಿಂದ ಯುವಕನ ಕುಟುಂಬಕ್ಕೆ 25 ಸಾವಿರ ರೂ.ಗಳನ್ನು ವಿತರಿಸಿದರು.
ಬಳಿಕ ಮಾತನಾಡಿದ ಅವರು, ವಿದೇಶಕ್ಕೆ ವೈದ್ಯಕೀಯ ಶಿಕ್ಷಣ ಪಡೆಯಲು ಹೋದ ನವೀನ್ ಯುದ್ಧದ ಸಂದರ್ಭದಲ್ಲಿ ಅಸುನೀಗಿದ್ದಾರೆ. ಇದೊಂದು ನೋವಿನ ಸಂಗತಿ. ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಲು ಬಂದಿದ್ದೇವೆ. ಇದೊಂದು ಸಾಂತ್ವನದ ಭೇಟಿ, ಸಾವು-ನೋವು ಸಂಭವಿಸಿದ ಸಮಯದಲ್ಲಿ ಸಾಂತ್ವನ ಹೇಳೋದು ನಮ್ಮ ಆದ್ಯ ಕರ್ತವ್ಯ. ಯುದ್ಧ ಯಾವತ್ತಿಗೂ ಅನಾರೋಗ್ಯಕರ, ಆದಷ್ಟು ಬೇಗ ಯುದ್ಧ ನಿಲ್ಲಲಿ ಎಂದು ಆಶಿಸುತ್ತೇವೆ ಎಂದರು.
ಬಳಿಕ ನವೀನ್ ಸಿರಿಗೆರೆ ಸಾಣೆಹಳ್ಳಿ ಶಾಖಾ ಮಠದ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿಗಳು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ಅವರು, ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ. ನಾವು ಬಯಸೋದೆ ಒಂದು, ಆಗೋದೆ ಒಂದು. ಇಡೀ ವಿಶ್ವದಲ್ಲಿ ಶಾಂತಿ ಕದಡಿ, ಅಶಾಂತಿ ಹೆಚ್ಚಾಗ್ತಿದೆ. ಮನಷ್ಯನಲ್ಲಿ ಸ್ವಾರ್ಥ ಹೆಚ್ಚಾಗಿ ಯುದ್ಧ ನಡೆಯುತ್ತಿದೆ. ಯುದ್ಧ ಬೇಗ ಕೊನೆಯಾಗಿ, ಶಾಂತಿ ನೆಲೆಸಬೇಕು. ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ. ಅವರ ಕುಟುಂಬಗಳು ದುಃಖದಲ್ಲಿವೆ. ಆ ಸಂಕಷ್ಟಗಳು ದೂರಾಗಿ ವಿದ್ಯಾರ್ಥಿಗಳು ತಾಯ್ನಾಡನ್ನು ಮುಟ್ಟುವಂತಾಗಲಿ ಎಂದು ಪಾರ್ಥಿಸುವುದಾಗಿ ಹೇಳಿದರು.
ಇದನ್ನೂ ಓದಿ: ಚಾಮರಾಜನಗರದಲ್ಲಿ ಒಂದು ತಿಂಗಳು ಎಲ್ಲ ರೀತಿಯ ಗಣಿಗಾರಿಕೆ ಬಂದ್: ಸಚಿವ ವಿ.ಸೋಮಣ್ಣ