ಹಾವೇರಿ: ತಾಲೂಕಿನ ಸಂಗೂರು ವರ್ದಿಯಿಂದ ನಾಗನೂರು ಗ್ರಾಮದವರೆಗೆ ಹರಿಯುವ ವರದಾ ನದಿಗೆ ರಾಸಾಯನಿಕಗಳನ್ನು ಬಿಟ್ಟ ಪರಿಣಾಮ ಇದೀಗ ನದಿ ಕಲುಷಿತಗೊಂಡಿದೆ.
ಸಂಗೂರು, ವರ್ದಿ, ವೆಂಕಟಾಪುರ, ಬೆಂಚಳ್ಳಿ, ಕೂಡಲ, ದೇವಿಹೊಸೂರು ಮತ್ತು ನಾಗನೂರುವರೆಗೆ ನದಿ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಈ ಗ್ರಾಮಗಳಲ್ಲದೆ ನದಿಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಕುಡಿಯಲು ನೀರು ಪೂರೈಸಲಾಗುತ್ತದೆ.
ನದಿಯ ನೀರು ಕಲುಷಿತಗೊಂಡ ಪರಿಣಾಮ ನದಿಯಲ್ಲಿದ್ದ ಸಾವಿರಾರು ಮೀನುಗಳು ಮೃತಪಟ್ಟಿವೆ. ಕಲುಷಿತ ನೀರು ಸೇವನೆಯಿಂದ ಹತ್ತಾರು ದನಗಳು ಅಸ್ವಸ್ಥಗೊಂಡಿದ್ದು, ಮೂರ್ನಾಲ್ಕು ಹಸುಗಳು ಸಾವಿಗೀಡಾಗಿವೆ ಎಂದು ರೈತರು ಆರೋಪಿಸಿದ್ದಾರೆ.
ಈ ಕಲುಷಿತ ನೀರಿನಿಂದ ದುರ್ವಾಸನೆ ಬರುತ್ತಿದ್ದು, ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಿದೆ. ಈ ರೀತಿಯ ನೀರನ್ನು ಜಮೀನುಗಳಿಗೆ ಬಿಟ್ಟ ಪರಿಣಾಮ ಬೆಳೆಗಳು ಸಹ ಹಾಳಾಗಿವೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್‌ವರೆಗೆ ನದಿಯ ನೀರು ನಮಗೆ ಉಪಯೋಗಕ್ಕೆ ಬರುತ್ತಿತ್ತು. ಆದರೆ ಇದೀಗ ನದಿಗೆ ರಾಸಾಯನಿಕಗಳನ್ನು ಬಿಟ್ಟ ಪರಿಣಾಮ ಮುಂದಿನ ಮಳೆ ನೀರು ಬರುವವರೆಗೆ ನಮಗೆ ನೀರಿಲ್ಲಾ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ನದಿ ನೀರನ್ನು ಪರಿಶೀಲನೆ, ನದಿಗೆ ರಾಸಾಯನಿಕ ಹರಿಬಿಡುತ್ತಿರುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.
ಇದನ್ನೂ ಓದಿ: ಒಂದೇ ಸಮಯದಲ್ಲಿ ಎರಡು ವಿಮಾನಗಳು ಟೇಕ್ ಆಫ್; ಬೆಂಗಳೂರಲ್ಲಿ ತಪ್ಪಿತು ಭಾರಿ ಅನಾಹುತ!
ಇದಕ್ಕೆಲ್ಲಾ ಸಂಸದ ಜಿಎಂ ಸಿದ್ದೇಶ್ವರ ಸಂಬಂಧಿಕರ ಜಿಎಂ ಶುಗರ್ಸ್ ಸಕ್ಕರೆ ಕಾರ್ಖಾನೆ ಕಾರಣ ಎಂದು ರೈತರು ಆರೋಪಿಸಿದ್ದಾರೆ. ಕಾರ್ಖಾನೆ ಪ್ರತಿವರ್ಷ ತನ್ನ ಜಮೀನಿನಲ್ಲಿರುವ ಕೆರೆಗೆ ಕಲುಷಿತ ನೀರು ಬಿಡುತ್ತಿತ್ತು. ಆದರೆ ಈ ವರ್ಷ ಆ ಕೆರೆ ತುಂಬಿದ ಪರಿಣಾಮ ಹೆಚ್ಚುವರಿ ನೀರು ನದಿಗೆ ಸೇರಿದೆ ಎಂದು ರೈತರು ಆರೋಪಿಸಿದ್ದಾರೆ. ಕಾರ್ಖಾನೆಯಿಂದ ಹೊರಬರುವ ರಾಸಾಯನಿಕಗಳೆಲ್ಲಾ ನದಿ ನೀರು ಸೇರಿದೆ. ಇದರಿಂದಾಗಿ ಸುಮಾರು ಎಂಟು ಕಿ.ಮೀ. ದೂರದವರೆಗೆ ನದಿ ನೀರು ಕಲುಷಿತಗೊಂಡಿದೆ. ಜನರ ಆರೋಗ್ಯ ಜಾನುವಾರುಗಳ ಆರೋಗ್ಯ ಕೆಟ್ಟಿದೆ. ಜಮೀನುಗಳಿಗೆ ಹರಿಸಿದ ನೀರು ರಾಸಾಯನಿಕಯುಕ್ತವಾಗಿರುವ ಕಾರಣ ಬೆಳೆಗಳು ಸಹ ಸರಿಯಾಗಿ ಬೆಳೆದಿಲ್ಲಾ ಎಂಬುದು ರೈತರ ಆರೋಪವಾಗಿದೆ.
ಜಿಲ್ಲಾಧಿಕಾರಿಗಳು ಈ ಕೂಡಲೇ ಕಾರ್ಖಾನೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯಿಸಿದ್ದಾರೆ. ನದಿ ನೀರು ಸಂಪೂರ್ಣ ಕಲುಷಿತವಾಗುವ ಮುನ್ನ ಅಳಿದು ಉಳಿದ ನೀರನ್ನಾದರು ಸಂರಕ್ಷಿಸುವಂತೆ ರೈತರು ಮನವಿ ಮಾಡಿದ್ದಾರೆ. ಕಲುಷಿತ ನೀರಿನಲ್ಲಿರುವ ಕ್ರಿಮಿಕೀಟಗಳನ್ನು ತಿಂದು ಪಕ್ಷಿಗಳು ಸಹ ಸಾವನ್ನಪ್ಪುತ್ತಿವೆ. ಹೆಚ್ಚಿನ ಅನಾಹುತವಾಗುವ ಮುನ್ನ ಸರ್ಕಾರ ಕ್ರಮಕೈಗೊಳ್ಳುವಂತೆ ರೈತರು ಮನವಿ ಮಾಡಿದ್ದಾರೆ.