ಹಾವೇರಿ : ಅಮಾಯಕ ನವೀನ್ ಮೃತಪಟ್ಟಿರೋದು ಬಹುದೊಡ್ಡ ಆಘಾತ. ಅತ್ಯಂತ ಸಹಜವಾಗಿ ತಂದೆ, ತಾಯಿ ಮತ್ತು ಕುಟುಂಬದವರಿಗೆ ತೀವ್ರವಾದ ನೋವಾಗಿದೆ. ಯುದ್ಧ ಪ್ರಾರಂಭವಾಗಿದೆ. ಇದರ ಮಧ್ಯೆ ಕುಟುಂಬದವರು ಮಗನ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಿಸಿ ಎಂದು ಬೇಡಿಕೆ ಇಟ್ಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ನವೀನ್ ಮನೆಗೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ಈ ಘಟನೆ ಆಗೋ ಮೊದಲು ನಾನು ಸುಮನ್ ಎಂಬಾತನ ಜೊತೆಗೂ ಮಾತನಾಡಿದ್ದೆ. ಯುದ್ಧ ಪ್ರಾರಂಭ ಆದಾಗಿಂದ ಪ್ರತಿದಿನದ ಅಲ್ಲಿನ ಮಾಹಿತಿ ಪಡೆಯುತ್ತಿದ್ದೇನೆ. ಪಾರ್ಥಿವ ಶರೀರ ತರೋ ವಿಷಯದಲ್ಲಿ ಈಗಾಗಲೇ ಪ್ರಯತ್ನ ಮಾಡಿದ್ದೇವೆ. ವಿದೇಶಾಂಗ ಸಚಿವ ಜೈಶಂಕರ ಅವರ ಜೊತೆ ಮಾತನಾಡಿದ್ದೇವೆ. ಕುಟುಂಬದವರ ಬೇಡಿಕೆ ಬಗ್ಗೆ ಸಿಎಂ ಜೊತೆನು ಮಾತನಾಡುವೆ. ಪಾರ್ಥಿವ ಶರೀರದ ಜೊತೆಗೆ ಅಲ್ಲಿನ ಮಕ್ಕಳನ್ನ ಕರೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ರಷ್ಯಾ-ಉಕ್ರೇನ್ ಖಾಯಂ ಆಗಿ ಯುದ್ಧ ನಿಲ್ಲಿಸಬೇಕು ಅನ್ನೋದು ನಮ್ಮ ನಿಲುವು. ಅಲ್ಲಿರೋ ಎಲ್ಲರೂ ಸೇಫ್ ಆಗಿ ಬರಬೇಕು ಎಂಬುದು ನಮ್ಮ ಆಶಯ. ಏರಫೋರ್ಸ್ ಮಿಲಿಟರಿಯ ಶಕ್ತಿಯ ಎಕ್ಸಫರ್ಟ್ಸ್ ಗಳ ಮೂಲಕವೂ ಪ್ರಯತ್ನ ಮಾಡುತ್ತಿದ್ದೇವೆ. ಯಾವ ದೇಶಗಳೂ ಇಷ್ಟು ಬೇಗ ಯುದ್ಧ ಆಗುತ್ತೆ ಅಂತಾ ತಿಳಿದಿರಲಿಲ್ಲ. ಇವತ್ತು ಸಹ ಒಂಬತ್ತು ವಿಮಾನಗಳು ದೇಶಕ್ಕೆ ಬರೋ ನಿರೀಕ್ಷೆ ಇದೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ : ಉಕ್ರೇನ್ನಲ್ಲಿ ಮೃತಪಟ್ಟ ನವೀನ್ ನಿವಾಸಕ್ಕೆ ಕಾಂಗ್ರೆಸ್ ಮುಖಂಡರ ಭೇಟಿ
ರಾಯಭಾರ ಕಚೇರಿಯವರು ಕುಟುಂಬದವರ ಜೊತೆ ಏನು ಮಾತನಾಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಆದ್ರೆ ನಾನು ನಿನ್ನೆಯಿಂದಲೇ ಪ್ರಯತ್ನ ಮಾಡುತ್ತಿದ್ದೇನೆ. ನಾವು ರಷ್ಯಾ ಮತ್ತು ಉಕ್ರೇನ್ ಸರ್ಕಾರಗಳಿಗೆ ಮನವಿ ಮಾಡಿದ್ದೇವೆ. ಪಾರ್ಥಿವ ಶರೀರದ ಜೊತೆಗೆ ನಮ್ಮ ಮಕ್ಕಳನ್ನ ಕರೆತರಲು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದೇವೆ. ಎಲ್ಲಾ ವಿದ್ಯಾರ್ಥಿಗಳನ್ನು ಕರೆತರೋವರೆಗೂ ಈ ಪ್ರಯತ್ನ ಇರುತ್ತೆ. ಭಾರತದವರು ಸುಮಾರು ಎಂಟು ಸಾವಿರ ಜನರು ಇರಬಹುದು ಎಂದು ಅಂದಾಜಿಸಲಾಗಿದೆ ಎಂದರು.
ನವೀನ್ ಅಣ್ಣ ಪಿಹೆಚ್ಡಿ ಮುಗಿಸಿದ ಮೇಲೆ ಅವರಿಗೆ ಸೂಕ್ತವಾದ ಅವಕಾಶ ಕಲ್ಪಿಸಿಕೊಡುತ್ತೇವೆ. ಮಕ್ಕಳನ್ನ ಸುರಕ್ಷಿತವಾಗಿ ತಂದು ನಂತರ ಅವರ ಭವಿಷ್ಯದ ಬಗ್ಗೆ ಚಿಂತನೆ ಮಾಡಲಾಗುತ್ತದೆ ಎಂದು ಸಚಿವ ಜೋಶಿ ತಿಳಿಸಿದರು.