ಹಾವೇರಿ: ತಾವು ಹಿರೇಕೆರೂರು ಉಪ ಚುನಾವಣೆಯಲ್ಲಿ ಸ್ಪರ್ಧಿಸಬೇಕಾ ಬೇಡ್ವಾ ಎಂಬುದನ್ನು ಸೋಮವಾರದವರೆಗೆ ಕಾಯ್ದು ನೋಡಿ ಆ ಮೇಲೆ ನಿರ್ಧರಿಸುವುದಾಗಿ ಮಾಜಿ ಶಾಸಕ ಯು ಬಿ ಬಣಕಾರ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ಮಾತನಾಡಿದ ಅವರು, ನಾಮಪತ್ರ ಸಲ್ಲಿಕೆಗೆ ಇನ್ನೂ ಕೆಲ ದಿನಗಳು ಮಾತ್ರ ಬಾಕಿ ಇದೆ. ಈ ಕುರಿತಂತೆ ಸುಪ್ರಿಂಕೋರ್ಟ್‌ನಲ್ಲಿ ಪ್ರಕರಣ ಇದೆ. ಸುಪ್ರೀಂ ನಿರ್ಣಯ ಏನಾಗುತ್ತದೆ ಎಂದು ಕಾದು ನೋಡೋಣ. ಅಲ್ಲದೆ ತಮ್ಮ ಹಿರಿಯ ನಾಯಕರು ಬಿ ಸಿ ಪಾಟೀಲ್‌ಗೆ ಬಿಜೆಪಿಯಿಂದ ಟಿಕೆಟ್ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಅವರಿಗೆ ಬೆಂಬಲಿಸುವಂತೆ ತಮಗೆ ಆದೇಶಿಸಿದ್ದಾರೆ. ಆದರೆ, ಕ್ಷೇತ್ರದ ಕಾರ್ಯಕರ್ತರು ತಮ್ಮನ್ನ ಬಿಡುತ್ತಿಲ್ಲಾ. ಕಾರ್ಯಕರ್ತರು ಮತ್ತು ಅಭಿಮಾನಿಗಳು ನಮಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಇವೆಲ್ಲಾ ವಿದ್ಯಮಾನಗಳನ್ನ ಕಾದುನೋಡಿ ಕಾರ್ಯಕರ್ತರ ಮನವೊಲಿಸುವ ಯತ್ನ ಮಾಡುತ್ತೇನೆ ಎಂದು ಬಣಕಾರ ತಿಳಿಸಿದ್ದಾರೆ.
ಒಂದು ವೇಳೆ ಕಾರ್ಯಕರ್ತರ ಮನವೊಲಿಕೆ ಸಾಧ್ಯವಾಗದಿದ್ದರೆ ಸೋಮವಾರದವರೆಗೆ ಕಾದು ನೋಡುವುದಾಗಿ ಬಣಕಾರ ತಿಳಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಯು ಬಿ ಬಣಕಾರ್ಗೆ ಸ್ಪಷ್ಟ ಅಭಿಪ್ರಾಯ ತಿಳಿಸುವಂತೆ ಪಟ್ಟುಹಿಡಿದು ಮುತ್ತಿಗೆ ಹಾಕಿದ್ದರು. ಯು. ಬಿ ಬಣಕಾರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ವಿಧಾನಸಭೆಗೆ ಸ್ಪರ್ಧಿಸಿದರು. ಕೆಲವೇ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಿ ಸಿ ಪಾಟೀಲ್ ವಿರುದ್ಧ ಪರಾಭವಗೊಂಡಿದ್ದರು.