ಹಾವೇರಿ: ಹಾನಗಲ್ ಸಮೀಪದ ನಡೆದಿದ್ದ ಗ್ಯಾಂಗರೇಪ್ ಪ್ರಕರಣದಲ್ಲಿ ಇಂದು ಮತ್ತೆ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ಪ್ರಕರಣದ 9 ಮತ್ತು 10 ನೇ ಆರೋಪಿಗಳನ್ನ ಹಾನಗಲ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನ ಅಕ್ಕಿಆಲೂರು ಗ್ರಾಮದ 27 ವರ್ಷದ ಇಬ್ರಾಹಿಂ ಮತ್ತು 25 ವರ್ಷದ ತೌಶಿಫ್ ಎಂದು ಗುರುತಿಸಲಾಗಿದೆ. ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 10 ಕ್ಕೇರಿದಂತಾಗಿದೆ.
ಇನ್ನೊಬ್ಬ ಆರೋಪಿ ಅಪಘಾತದಲ್ಲಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಯಲ್ಲಿ ಇನ್ನು ಹೆಚ್ಚು ಆರೋಪಿಗಳು ಪಾಲ್ಗೊಂಡಿರುವ ಕುರಿತಂತೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಜ.8 ರಂದು ಹಾವೇರಿ ಜಿಲ್ಲೆ ಹಾನಗಲ್ ಸಮೀಪದ ಅರಣ್ಯ ಪ್ರದೇಶದಲ್ಲಿ ಮಹಿಳೆಯ ಮೇಲೆ ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು.
ಇದಕ್ಕೂ ಮುನ್ನ ಜೋಡಿ ತಂಗಿದ್ದ ಲಾಡ್ಜ್ಗೆ ನುಗ್ಗಿದ ಯುವಕರ ತಂಡ, ಹಲ್ಲೆ ನಡೆಸಿತ್ತು. ಬಳಿಕ ಲಾಡ್ಜ್ನಿಂದ ಹೊರಗೆ ಕರೆದುಕೊಂಡು ಬಂದು ಹಲ್ಲೆ ನಡೆಸಿ ಆವಾಜ್ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ಈ ಕುರಿತು ಹಾನಗಲ್ ಪೊಲೀಸ್ ಠಾಣೆಯಲ್ಲಿ ಜ.10 ರಂದು ಹಲ್ಲೆ ಪ್ರಕರಣ ದಾಖಲಾಗಿತ್ತು. ನಂತರ ನ್ಯಾಯಾಧೀಶರ ಮುಂದೆ ಮಹಿಳೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಕುರಿತಂತೆ ಹೇಳಿಕೆ ನೀಡಿದ್ದರು. ಮಹಿಳೆಯ ಆರೋಪ ಆಲಿಸಿದ ನ್ಯಾಯಾಧೀಶರು, ಸಾಮೂಹಿಕ ಅತ್ಯಾಚಾರದ ಆರೋಪಿಗಳ ಬಂಧನಕ್ಕೆ ಆದೇಶಿಸಿದ್ದರು. ನಂತರ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಬಾಲಕಿಯನ್ನ ಹಾವೇರಿಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. ಇದೇ 14 ರಂದು ಸಂತ್ರಸ್ತೆಯನ್ನ ಶಿರಶಿಯ ಸ್ವಗೃಹಕ್ಕೆ ಬಿಟ್ಟು ಬರಲಾಗಿತ್ತು.
ಇದನ್ನೂ ಓದಿ: ಹಾವೇರಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಸಿಎಂ ಭೇಟಿಗೆ ಆಗಮಿಸಿದ ಸಂತ್ರಸ್ತೆಯ ಕುಟುಂಬ