ಹಾವೇರಿ: ಜಿಲ್ಲೆಯಿಂದ ಗುತ್ತಲ ಸಂಪರ್ಕಿಸುವ ರಸ್ತೆಯನ್ನ ದ್ವಿಪಥವಾಗಿ ನಿರ್ಮಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ರಸ್ತೆ ಬದಿಯಲ್ಲಿ ಇರುವ ಮರಗಳನ್ನು ಮಾರಣಹೋಮ ಮಾಡಲಾಗುತ್ತಿದೆ. ಶಿವಲಿಂಗ ನಗರದಿಂದ ಹುಕ್ಕೇರಿ ಮಠದವರೆಗೆ 25 ಕ್ಕೂ ಅಧಿಕ ಮರಗಳನ್ನು ಕಡಿಯಲಾಗಿದೆ.
ಹುಣಸೆ, ಅಕೇಶಿಯಾ ಸೇರಿದಂತೆ ವಿವಿಧ ಜಾತಿಯ ಮರಗಳನ್ನ ಕತ್ತರಿಸಲಾಗಿದೆ. ಈ ಮರಗಳನ್ನು ಕಡಿದು ರಸ್ತೆಯ ಅಕ್ಕಪಕ್ಕದಲ್ಲಿ ಹಾಕಲಾಗಿದೆ. ಶನಿವಾರದಿಂದ ಈ ಮರಗಳ ತುಂಡುಗಳನ್ನು ಅಡ್ಡೆಗಳಿಗೆ ಕಳಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಕ್ರೇನ್ ಮತ್ತು ಜೆಸಿಬಿ ಮೂಲಕ ಮರದ ಕಾಂಡಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತದೆ.
ಮರಗಳ ಮಾರಣಹೋಮಕ್ಕೆ ಪರಿಸರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 40 ವರ್ಷಗಳಿಂದ ಬೆಳೆದಿದ್ದ ಈ ಮರಗಳು ನೆರಳಿನೊಂದಿಗೆ ಆದಾಯವನ್ನೂ ತರುತ್ತಿದ್ದವು. ಆದರೆ ಇವುಗಳನ್ನ ಪರಿಗಣಿಸದೆ ರಸ್ತೆಗಾಗಿ ಮರಗಳನ್ನು ಕಟ್ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತಂತ್ರಜ್ಞಾನ ಬಳಿಸಿಕೊಳ್ಳದೆ ನಾಲ್ಕು ದಶಕಗಳಿಂದ ನೆರಳು ನೀಡುತ್ತಿದ್ದ ಮರಗಳನ್ನು ಕಡಿಯಲಾಗಿದೆ. ಮರಗಳ ಮಾರಣಹೋಮ ಇಲ್ಲಿಗೇ ನಿಲ್ಲಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಪರಿಸರ ಪ್ರೇಮಿಗಳು ಎಚ್ಚರಿಕೆ ನೀಡಿದ್ದಾರೆ.