ಹಾವೇರಿ : ಜಿಲ್ಲೆಯ ವಿವಿಧೆಡೆ ಶನಿವಾರ ಮಳೆರಾಯ ಆರ್ಭಟಿಸಿದ್ದಾನೆ. ಹಾನಗಲ್ ಪಟ್ಟಣದ ಹೊರ ವಲಯದಲ್ಲಿ ಸಿಡಿಲು ಬಡಿದು ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಯುವಕನನ್ನ 25 ವರ್ಷದ ವಿರೇಶ್ ಹೊಸಮನಿ ಎಂದು ಗುರುತಿಸಲಾಗಿದೆ. ವಿರೇಶ್ ಹೊಸಮನಿ ಮತ್ತು ಆತನ ಸ್ನೇಹಿತರು ಹಾನಗಲ್ ಪಟ್ಟಣದಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಶನಿವಾರ ಸಂಜೆ ಹಾನಗಲ್ನಲ್ಲಿ ಕೆಲಸ ಮಾಡಿಕೊಂಡು ಸ್ವಗ್ರಾಮ ಹಸನಾಬಾದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಮಳೆ ಶುರುವಾಗಿದೆ. ಈ ಸಂದರ್ಭದಲ್ಲಿ ಮಳೆ ಬಂದಿದ್ದರಿಂದ ವಿರೇಶ್ ಮತ್ತು ಆತನ ಸ್ನೇಹಿತರು ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದು ವಿರೇಶ ಸಾವನ್ನಪ್ಪಿದ್ದಾನೆ.
ಘಟನೆಯಲ್ಲಿ ವಿರೇಶ್ ಜೊತೆ ಇದ್ದ 20 ವರ್ಷದ ಶಶಾಂಕ ಮತ್ತು 20 ವರ್ಷದ ದೇವರಾಜ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹಾನಗಲ್ ತಾಲೂಕಾಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಭೇಟಿ ನೀಡಿ ವಿರೇಶ್ ಪೋಷಕರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ವಿರೇಶ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಎರಡು ವಿದ್ಯುತ್ ಸ್ಥಾವರಗಳನ್ನು ಖಾಸಗಿಯವರಿಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ?