ಹಾವೇರಿ: ಜಿಲ್ಲೆಯ ಕೋಣನತಂಬಿಗೆ ಗ್ರಾಮದಲ್ಲಿ ಪ್ರತಿ ವರ್ಷ ನೂಲು ಹುಣ್ಣಿಮೆಯಂದು ವಿಶಿಷ್ಟ ತೆಪ್ಪೋತ್ಸವ ನಡೆಯುತ್ತದೆ. ಈ ಗ್ರಾಮದ ಪಕ್ಕದಲ್ಲಿ ತುಂಬಿ ಹರಿಯುವ ವರದಾ ನದಿಯಲ್ಲಿ ಉತ್ಸವ ನಡೆಸಲಾಗುತ್ತದೆ. ರಭಸವಾಗಿ ಮೈದುಂಬಿ ಹರಿಯುವ ನದಿಯಲ್ಲಿ ತೆಪ್ಪೋತ್ಸವ ಮಾಡುವ ಮೂಲಕ ಭಕ್ತರು ಸಂಭ್ರಮಿಸಿದರು.
ಗ್ರಾಮದ ಕಲ್ಮೇಶ್ವರ ಮತ್ತು ಸಿದ್ದಾರೂಢರ ಮೂರ್ತಿಗಳನ್ನ ತೆಪ್ಪದಲ್ಲಿಟ್ಟು ಉತ್ಸವ ಮಾಡಲಾಗುತ್ತದೆ. ತಳಿರು ತೋರಣಗಳಿಂದ ಸಿಂಗರಿಸಿದ ರಥವನ್ನ ಗ್ರಾಮದಲ್ಲಿನ ಕಲ್ಮೇಶ್ವರ ದೇವಸ್ಥಾನದಿಂದ ಮೆರವಣಿಗೆ ಮಾಡಲಾಯಿತು. ಸಿಂಗರಿಸಿದ ರಥವನ್ನ ಡೊಳ್ಳು ಭಜನೆ ಜಾಂಜ್ ವಾದ್ಯ ಮೇಳದೊಂದಿಗೆ ಕೋಣನತಂಬಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ನದಿ ಪಕ್ಕದಲ್ಲಿರುವ ಆಂಜನೇಯ ದೇವಸ್ಥಾನದ ಮುಂದೆ ತೆಪ್ಪದ ಮೇಲೆ ರಥವಿಟ್ಟು ಉತ್ಸವ ಆಚರಿಸಲಾಯಿತು. ಈಜು ಕುಂಬಳ ಸಹಾಯದಿಂದ ಮತ್ತು ಟ್ಯೂಬ್‌ಗಳನ್ನ ಹಾಕಿಕೊಂಡ ಗ್ರಾಮಸ್ಥರು ವರದೆಯ ಇನ್ನೊಂದು ತಟಕ್ಕೆ ತೆಪ್ಪೋತ್ಸವ ತೆಗೆದುಕೊಂಡು ಹೋದರು. ವರದೆಯ ಇನ್ನೊಂದು ತಟದಲ್ಲಿ ತೆಪ್ಪೋತ್ಸವಕ್ಕೆ ಪೂಜೆ ಸಲ್ಲಿಸಿದ ಬಳಿಕ ಮರಳಿ ಗ್ರಾಮಕ್ಕೆ ತರಲಾಯಿತು.

ಸಿದ್ಧಾರೂಢರ ಅಣತಿಯಂತೆ ತೆಪ್ಪೋತ್ಸವ: ಸಿದ್ದರೂಢರ ಈ ತೆಪ್ಪೋತ್ಸವಕ್ಕೆ ಒಂದು ಕಾರಣವಿದೆ. ಹುಬ್ಬಳ್ಳಿಯ ಸಿದ್ಧಾರೂಢರಿಗೆ ಗ್ರಾಮದಲ್ಲಿ ಸಾಕಷ್ಟು ಭಕ್ತರಿದ್ದಾರೆ. ಈ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಸಿದ್ದಾರೂಢ ಮಠದಲ್ಲಿ ನಡೆಯುವ ತೆಪ್ಪೋತ್ಸವಕ್ಕೆ ಕೋಣತಂಬಿಗೆ ಗ್ರಾಮದಿಂದ ನೂರಾರು ಭಕ್ತರು ಹೋಗುತ್ತಿದ್ದರಂತೆ. ಆದರೆ ಒಮ್ಮೆ ಭಕ್ತರು ಹುಬ್ಬಳ್ಳಿಗೆ ಹೋಗುವಾಗ ಮಳೆಯಾಗಿ ಸಾಕಷ್ಟು ನೋವು ಅನುಭವಿಸಿದರಂತೆ. ಇದನ್ನು ತಿಳಿದ ಸಿದ್ದಾರೂಢರು ಹುಬ್ಬಳ್ಳಿಯಲ್ಲಿ ನಡೆಯುವ ಪುಷ್ಕರಣೆಯಲ್ಲಿನ ತೆಪ್ಪೋತ್ಸವ ನೋಡಲು ಕೋಣನತಂಬಿಗೆಯಿಂದ ಹುಬ್ಬಳ್ಳಿಗೆ ಆಗಮಿಸುವ ಬದಲು ಕೋಣನತಂಬಿಗೆಯ ನದಿಯಲ್ಲಿ ತೆಪ್ಪೋತ್ಸವ ಆಚರಿಸುವಂತೆ ಕರೆ ನೀಡಿದ್ದರಂತೆ.
ಅದರಂತೆ ಪ್ರತಿವರ್ಷ ನೂಲು ಹುಣ್ಣಿಮೆಯ ದಿನ ಈ ಗ್ರಾಮದಲ್ಲಿ ನದಿಯಲ್ಲಿ ತೆಪ್ಪೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ಹುಬ್ಬಳ್ಳಿಯಲ್ಲಿ ನಡೆಯುವ ತೆಪ್ಪೋತ್ಸವಕ್ಕಿಂತ ಹಿಂದಿನ ದಿನ ಕೋಣನತಂಬಿಗೆ ಗ್ರಾಮದಲ್ಲಿ ಸಿದ್ಧಾರೂಢರ ಅಣತಿಯಂತೆ ತೆಪ್ಪೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ.
ಸಿದ್ದಾರೂಢ ಮಠದಲ್ಲಿ ಇಂದು ತೆಪ್ಪೋತ್ಸವ ನಡೆಯಲಿದೆ. ಈ ಹಿನ್ನೆಲೆ ಹಾವೇರಿಯ ಕೋಣನತಂಬಿಗೆ ಗ್ರಾಮದಲ್ಲಿ ನಿನ್ನೆ (ಗುರುವಾರ) ತೆಪ್ಪೋತ್ಸವ ನಡೆಸಲಾಯಿತು. ಇಲ್ಲಿ ತೆಪ್ಪೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರು ಮರುದಿನ ಹುಬ್ಬಳ್ಳಿಯ ಸಿದ್ದಾರೂಢ ಮಠದಲ್ಲಿ ನಡೆಯುವ ತೆಪ್ಪೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ತೆಪ್ಪೋತ್ಸವದ ನಿಮಿತ್ತ ಗ್ರಾಮದಲ್ಲಿ ಏಳು ದಿನಗಳ ಕಾಲ ಸಪ್ತಾ ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನ ನಡೆಸಲಾಗುತ್ತದೆ.

ನದಿ ಎಷ್ಟು ಅಪಾಯ ಪ್ರಮಾಣದಲ್ಲಿ ಹರಿಯುತ್ತಿದ್ದರೂ ಸಹ ಈ ಗ್ರಾಮದಲ್ಲಿ ಈ ಆಚರಣೆ ನಿಂತಿಲ್ಲ. ಕಳೆದ ಹಲವು ದಶಕಗಳಿಂದ ಗ್ರಾಮದಲ್ಲಿ ಆ ಆಚರಣೆ ಆಚರಿಸಲಾಗುತ್ತಿದೆ. ಈ ಎಂಟು ದಿನಗಳ ಕಾಲ ಸ್ವತಃ ಸಿದ್ದಾರೂಢರು ತಮ್ಮ ಗ್ರಾಮದಲ್ಲಿ ನೆಲೆಸಿರುತ್ತಾರೆ ಎಂಬುವುದು ಗ್ರಾಮಸ್ಥರ ನಂಬಿಕೆ. ಈ ವಿಶೇಷ ತೆಪ್ಪೋತ್ಸವ ನೋಡಲು ಕೋಣನತಂಬಿಗೆ ಗ್ರಾಮದ ಅಕ್ಕಪಕ್ಕದ ಗ್ರಾಮಸ್ಥರು ಆಗಮಿಸುತ್ತಾರೆ. ಮುತ್ತೈದೆಯರು ಸಿದ್ದಾರೂಢರ ತೆಪ್ಪೋತ್ಸವಕ್ಕೆ ಆರತಿ ಬೆಳಗಿ ಪೂಜೆ ಸಲ್ಲಿಸುತ್ತಾರೆ. ಸಿದ್ದಾರೂಢರ ಆಶೀರ್ವಾದ ನಮ್ಮ ಗ್ರಾಮದ ಮೇಲಿದ್ದು ಗ್ರಾಮ ಸುಭಿಕ್ಷವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಇದನ್ನೂ ಓದಿ: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಅದ್ಧೂರಿಯಾಗಿ ನಡೆದ ಗಿರಿಜಾ ಕಲ್ಯಾಣದ ತೆಪ್ಪೋತ್ಸವ- ವಿಡಿಯೋ