ಹಾವೇರಿ: ದೇಶ ಕಂಡ ಮಹಾನ್ ಕವಿಗಳಲ್ಲಿ ವಿನಾಯಕ ಕೃಷ್ಣ ಗೋಕಾಕ್ ಕೂಡ ಒಬ್ಬರು. ಕವಿ, ಕಾದಂಬರಿಕಾರ, ವಿಮರ್ಶಕ ಸೇರಿದಂತೆ ಸಾಹಿತ್ಯದ ಹಲವು ವಿಭಾಗಗಳಲ್ಲಿ ತಮ್ಮದೇ ಆದ ಛಾಪು ಮೂಡಿಸುವುದರ ಜೊತೆಗೆ ಕನ್ನಡಕ್ಕೆ ಐದನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹೆಗ್ಗಳಿಕೆ ವಿ.ಕೃ. ಗೋಕಾಕ್ ಅವರಿಗೆ ಸಲ್ಲುತ್ತದೆ.
ಗೋಕಾಕ್ರವರು ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಜನಿಸಿದ್ದು, ಇವರ ಸ್ಮರಣೆಗಾಗಿ ಗೋಕಾಕ್ ಟ್ರಸ್ಟ್ ಜಿಲ್ಲೆಯ ವಿವಿಧೆಡೆ ಮೂರು ಕಂಚಿನ ಪುತ್ಥಳಿ ಸ್ಥಾಪಿಸಿದೆ. ಆದ್ರೆ ದುರಾದೃಷ್ಟವೆಂದರೆ ಹಾವೇರಿಯ ಗುರುಭವನದ ಬಳಿ ಇರುವ ಗೋಕಾಕ್ ಪುತ್ಥಳಿಯೊಂದು ಮಳೆ ಗಾಳಿಗೆ ಸಿಲುಕಿ ತನ್ನ ಮೂಲಸ್ವರೂಪವನ್ನು ಕಳೆದುಕೊಂಡಿದ್ದು, ಅರ್ಧ ಭಾಗ ಕಂಚಿನ ರೀತಿ ಇದ್ದರೆ, ಉಳಿದ ಭಾಗ ಕಪ್ಪು ಕಪ್ಪಾಗಿದೆ.
ಇನ್ನು ಈ ಬಗ್ಗೆ ಅಧಿಕಾರಿಗಳನ್ನ ಕೇಳಿದರೆ ನಾವು ಮೂಲ ಸ್ವರೂಪವನ್ನ ಉಳಿಸಿಕೊಂಡು ಬಂದಿದ್ದಾಗಿ ಹೇಳುತ್ತಾರೆ.
ಒಟ್ಟಿನಲ್ಲಿ ಸಾಹಿತಿ ಪುತ್ಥಳಿ ಸುತ್ತ ವೃತ್ತ ನಿರ್ಮಿಸಿದ್ದು, ಅದು ಸಹ ಇದ್ದು ಇಲ್ಲದಂತಿದೆ. ಈ ಪುತ್ಥಳಿಗೆ ಯಾವುದೇ ಛಾವಣಿ ನಿರ್ಮಿಸದ ಕಾರಣ ತನ್ನ ಮೂಲಸ್ವರೂಪ ಕಳೆದುಕೊಳ್ಳುತ್ತಿದ್ದು, ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದರೇ ಜ್ಞಾನಪೀಠ ಪ್ರಶಸ್ತಿ ವಿಜೇತ ಗೋಕಾಕರೆಂದು ಗುರುತಿಸಿಕೊಳ್ಳುತ್ತಿರುವ ಪುತ್ಥಳಿ ಮುಂದಿನ ದಿನಗಳಲ್ಲಿ ಯಾರು ಗುರುತಿಸದಂತಾಗುವುದರಲ್ಲಿ ಎರಡು ಮಾತಿಲ್ಲ.