ಹಾವೇರಿ: ಶಾಸಕರ ಅನರ್ಹತೆ ಪ್ರಕರಣದ ಕುರಿತಂತೆ ಸುಪ್ರಿಂಕೋರ್ಟ್‌ನಲ್ಲಿ ಶುಕ್ರವಾರ ಸಂಜೆ ಪ್ರಕಟವಾಗಲಿರುವ ತೀರ್ಪು ತಮ್ಮ ಪರವಾಗಿರಲಿದೆ ಎಂದು ಹಿರೇಕೆರೂರಿನ ಅನರ್ಹ ಶಾಸಕ ಬಿ ಸಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರಿನ ಸ್ವಗೃಹದಲ್ಲಿ ಮಾತನಾಡಿದ ಅವರು, ಈಗಾಗಲೇ ನ್ಯಾಯಾಲಯ ಬೇರೆ ರಾಜ್ಯಗಳಲ್ಲಿ ಇದೇ ರೀತಿಯ ಪ್ರಕರಣಗಳನ್ನು ಪರಿಶೀಲನೆ ನಡೆಸಿದೆ ಎಂದು ತಿಳಿಸಿದರು. ರಾಜ್ಯ ಸ್ಪೀಕರ್ ತೆಗೆದುಕೊಂಡ ನಡೆ ರಾಜಕೀಯ ಪ್ರೇರಿತ ದುರುದ್ದೇಶದ ನಡೆ. ಆ ಸ್ಪೀಕರ್ ನೀಡಿರುವ ತೀರ್ಪಿಗೆ ಸೋಲಾಗಲಿದೆ. ಅಲ್ಲದೆ ಚುನಾವಣಾ ಆಯೋಗ ಸುಪ್ರಿಂ ಮುಂದೆ ತಾವು ಸ್ಪರ್ಧಿಸಲು ಯಾವುದೇ ಅಭ್ಯಂತರವಿಲ್ಲ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಉಪ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದು ಬಹುತೇಕ ಖಚಿತ ಎಂಬ ವಿಶ್ವಾಸವನ್ನ ಬಿ ಸಿ ಪಾಟೀಲ್ ವ್ಯಕ್ತಪಡಿಸಿದರು.
ಸದ್ಯ ನಾನು ಯಾವ ಪಕ್ಷದಲ್ಲೂ ಇಲ್ಲ. ಶುಕ್ರವಾರ ಸುಪ್ರಿಂ ತೀರ್ಪಿನ ನಂತರ ನಾಮಪತ್ರ ಸಲ್ಲಿಕೆ ಕುರಿತಂತೆ ಹೇಳುವುದಾಗಿ ಬಿ ಸಿ ಪಾಟೀಲ್ ತಿಳಿಸಿದರು. ಇದೇ ವೇಳೆ ಸಿಎಂ ಯಡಿಯೂರಪ್ಪ ನಡೆಸಿದ ಸಂಧಾನ ಸಭೆಗೂ ತಮಗೂ ಯಾವುದೇ ಸಂಬಂಧವಿಲ್ಲ. ಕಾರ್ಯಕರ್ತರ ಮತ್ತು ಅಭಿಮಾನಿಗಳ ಅನಿಸಿಕೆ ಕೇಳಲು ತಮ್ಮ ನಿವಾಸದಲ್ಲಿ ಗುರುವಾರ ಸಭೆ ಕರೆದಿರುವುದಾಗಿ ಬಿ ಸಿ ಪಾಟೀಲ್ ತಿಳಿಸಿದರು.