ಹಾವೇರಿ: ಹೋರಿ ಬೆದರಿಸೋ ಸ್ಪರ್ಧೆಯ ಅಖಾಡದಲ್ಲಿ ಧೂಳೆಬ್ಬಿಸಿಕೊಂಡು ಮಿಂಚಿನ ವೇಗದಲ್ಲಿ ಓಡಿ ಫೇಮಸ್ ಆಗಿದ್ದ ಹೋರಿ ಇವತ್ತು ಅನಾರೋಗ್ಯದಿಂದ ಮೃತಪಟ್ಟಿದೆ. ಈ ಹೋರಿಯನ್ನು ಮನೆ ಮಗನಂತೆ ಸಾಕಿದ ಮಾಲೀಕ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಿದ ಘಟನೆ ಹಾನಗಲ್ ತಾಲೂಕಿನ ಮಲಗುಂದ ಗ್ರಾಮದಲ್ಲಿ ನಡೆದಿದೆ.
ತನ್ನ ನೆಚ್ಚಿನ ಹೋರಿಯ ಅಂತ್ಯಕ್ರಿಯೆಯನ್ನು ಹೋರಿ ಮಾಲೀಕ ರೇಣುಕಯ್ಯ ಹಿರೇಮಠ ಮನುಷ್ಯರ ಅಂತ್ಯಕ್ರಿಯೆಯಂತೆ ನೆರವೇರಿಸಿ ಗಮನ ಸೆಳೆದಿದ್ದಾರೆ. ಮೃತ ಹೋರಿಗೆ ಪೂಜೆ ಸಲ್ಲಿಸಿ, ಗ್ರಾಮದ ತುಂಬೆಲ್ಲಾ ವಾದ್ಯಮೇಳಗಳ ಸಮೇತ ಮೆರವಣಿಗೆ ಮಾಡಿದ್ದಾರೆ. ನಂತರ ತಮ್ಮ ಜಮೀನಿನಲ್ಲಿ ವಿಧಿ ವಿಧಾನಗಳ ಮೂಲಕ ಶಾಸ್ತ್ರೋಕ್ತ ರೀತಿಯಲ್ಲಿ ಮಣ್ಣು ಮಾಡಿದರು.
ಹಾವೇರಿ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ವಿವಿಧೆಡೆಗಳಲ್ಲಿ ನಡೆದ ಹೋರಿ ಬೆದರಿಸೋ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಪ್ರಳಯ ಹೆಸರಿ ಹೋರಿ ಅಖಾಡದಲ್ಲಿ ಧೂಳೆಬ್ಬಿಸಿಕೊಂಡು ಓಡಿ, ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.
ಹೋರಿ ಮಾಲೀಕ ರೇಣುಕಯ್ಯನ ಕೆಲಸಕ್ಕೆ ಗ್ರಾಮಸ್ಥರು ಸಾಥ್ ನೀಡಿ ಮೆರವಣಿಗೆ, ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.