ಹಾವೇರಿ : ಹೋರಿ ಓಡಿಸುವ ಸ್ಪರ್ಧೆಯಲ್ಲಿ ಹೆಸರು ಮಾಡಿದ್ದ ಹಾವೇರಿ ತಾಲೂಕು ದೇವಿಹೊಸೂರು ಗ್ರಾಮದ ಶಿವನಂದಿ ಹೋರಿ ಅನಾರೋಗ್ಯದಿಂದ ಅಸುನೀಗಿದೆ.
ಗ್ರಾಮದ ರೈತ ನಿಂಗಪ್ಪ ಕಬ್ಬೂರು ಕಳೆದ 11 ವರ್ಷಗಳಿಂದ ತಮ್ಮ ಮನೆಯಲ್ಲಿ ಶಿವನಂದಿಯನ್ನು ಮಗನಂತೆ ಸಾಕಿ ಸಲುಹಿದ್ದರು. ಶಿವಮೊಗ್ಗ, ಹಾವೇರಿ, ಗದಗ ಸೇರಿದಂತೆ ವಿವಿಧ ಜಿಲ್ಲೆಯ ಹೋರಿ ಹಬ್ಬದಲ್ಲಿ ಶಿವನಂದಿ ಹೋರಿ ಹೆಸರು ಮಾಡಿತ್ತು. ಇದೀಗ ಅನಾರೋಗ್ಯದಿಂದ ಮೃತಪಟ್ಟಿದ್ದು, ಹೋರಿ ಅಭಿಮಾನಿಗಳಿಗೆ ನೋವುಂಟಾಗಿದೆ. ಹೋರಿ ಹಬ್ಬದಲ್ಲಿ ಬೈಕ್, ಟಿವಿ, ಸೋಪಾ, ಚಿನ್ನ ಹಾಗೂ ಬೆಳ್ಳಿ ತಿಜುರಿ ಸೇರಿದಂತೆ ವಿವಿಧ ಬಹುಮಾನ ಗೆದ್ದಿತ್ತು. ಗ್ರಾಮದ ತುಂಬಾ ಮೃತ ಹೋರಿಯನ್ನು ಮೆರವಣಿಗೆ ಮಾಡಲಾಯಿತು.
ಪಟಾಕಿ ಸಿಡಿಸಿ, ಸಕಲವಾದ್ಯಗಳ ಮೂಲಕ ಶಿವನಂದಿಯ ಮೆರವಣಿಗೆ ಮಾಡಲಾಯಿತು. ಸಕಲ ವಿಧಿವಿಧಾನಗಳ ಮೂಲಕ ರೈತ ನಿಂಗಪ್ಪ ಕಬ್ಬೂರು ಜಮೀನಿನಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಿದರು. ಅಪಾರ ಅಭಿಮಾನಿಗಳು ಆಗಮಿಸಿ ಶಿವನಂದಿಯ ಅಂತಿಮ ದರ್ಶನ ಪಡೆದರು.