ಹಾವೇರಿ: ಜಿಲ್ಲೆಯಲ್ಲಿ ಅದ್ಧೂರಿಯಾಗಿ ಬುಧವಾರ ಹೋರಿಯೊಂದರ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ದನಬೆದರಿಸುವ ಸ್ಪರ್ಧೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಕಲ್ಲೇದೇವರ ಕಲ್ಮೇಶ್ವರ ಎಂಬ ಹೋರಿಯನ್ನು ಬ್ಯಾಡಗಿ ತಾಲೂಕಿನ ಕಲ್ಲೇದೇವರ ಗ್ರಾಮದ ಮಲ್ಲಪ್ಪ ಕಡಮ್ಮನವರ್ ತಂದು ನಿನ್ನೆಗೆ ಒಂದು ವರ್ಷ ತುಂಬಿದೆ. ಈ ಹಿನ್ನೆಲೆ ಇದೇ ದಿನವನ್ನು ಹೋರಿಯ ಬರ್ತ್ಡೇಯಾಗಿ ಆಚರಿಸಲಾಗಿದೆ.
ಹೋರಿಯ ಹಿನ್ನೆಲೆ ಹೀಗಿದೆ: ಮಲ್ಲಪ್ಪ ಕಡಮ್ಮನವರ್ ಗ್ರಾಮದ ಸಾಮಾನ್ಯ ರೈತರಲ್ಲಿ ಒಬ್ಬರು. ಇವರು ತಮ್ಮ ಜಮೀನಿನಲ್ಲಿ ಕೃಷಿಗಾಗಿ ಬಸವನಹಳ್ಳಿಯಿಂದ ಹೋರಿಯನ್ನು ತಂದಿದ್ದರು. ಮಲ್ಲಪ್ಪನ ಮಕ್ಕಳು ಕೃಷಿ ಚಟುವಟಿಕೆಗಾಗಿ ತಂದಿದ್ದ ಹೋರಿಯ ಬಗ್ಗೆ ತೀವ್ರ ಆಸಕ್ತಿ ತೋರಿಸಿದರು. ಹೋರಿ ನೋಡಲು ಬಹಳ ಕಟ್ಟುಮಸ್ತಾಗಿದ್ದರಿಂದ ದನಬೆದರಿಸುವ ಸ್ಪರ್ಧೆಯಲ್ಲಿ ಬಿಟ್ಟರೆ ಹೇಗಿರುತ್ತೆ ಎಂದು ಸ್ನೇಹಿತರೆಲ್ಲಾ ಸೇರಿಕೊಂಡು ಸ್ಪರ್ಧೆಯಲ್ಲಿ ಬಿಟ್ಟರು. ಅಲ್ಲಿಂದ ಈ ಹೋರಿಯ ಚಿತ್ರಣವೇ ಬದಲಾಗಿ ಹೋಯಿತು.
ಕೃಷಿಗಾಗಿ ತಂದ ಹೋರಿ ದನಬೆದರಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಬಂಪರ್ ಬಹುಮಾನಗಳಿಸಿತು. ಇದಕ್ಕೆ ಕಲ್ಲೇದೇವರ ಕಲ್ಮೇಶ್ವರ ಎಂದು ನಾಮಕರಣ ಮಾಡಲಾಯಿತು. ಬಳಿಕ ದನಬೆದರಿಸುವ ಸ್ಪರ್ಧೆಗೆ ಕಲ್ಮೇಶ್ವರನನ್ನು ಸಿದ್ಧಪಡಿಸಲಾಯಿತು. ಹೋರಿ ಭಾಗವಹಿಸಿದ ಸ್ಪರ್ಧೆಗಳಲ್ಲಿ ಬಹುಮಾನ ಗ್ಯಾರಂಟಿ ಎನ್ನುವಂತಾಯಿತು. ಜಮೀನಿನಲ್ಲಿ ಉಳುಮೆ ಮಾಡಿರಬೇಕಾಗಿದ್ದ ಹೋರಿ ಸಾವಿರಾರು ಅಭಿಮಾನಿಗಳ ಮನಸ್ಸು ಗೆದ್ದಿತು. ಅಷ್ಟೇ ಅಲ್ಲದೆ ತನ್ನದೇಯಾದ ಸ್ಟೈಲ್‌ನಿಂದ ಸ್ಪರ್ಧೆಯ ಆಖಾಡದಲ್ಲಿ ಹೆಸರು ಮಾಡಿತು.
ನಿನ್ನೆಗೆ ಹೋರಿಯನ್ನು ತಂದು ಒಂದು ವರ್ಷ. ಈ ಹಿನ್ನೆಲೆಯಲ್ಲಿ ಮಲ್ಲಪ್ಪ ಮತ್ತು ಮಕ್ಕಳು ಹೋರಿಯ ಹುಟ್ಟುಹಬ್ಬ ಆಚರಿಸಿದರು. ವಿವಿಧ ವಸ್ತುಗಳಿಂದ ಅಲಂಕಾರ ಮಾಡಿದ ಹೋರಿಯನ್ನು ಕಲ್ಮೇಶ್ವರ ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸಲಾಯಿತು. ನಂತರ ಪಟಾಕಿ ಸದ್ದಿನೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಮನೆಗೆ ಬಂದ ಕಲ್ಮೇಶ್ವರ ಹೋರಿಗೆ ಆರತಿ ಬೆಳಗಿ ಬರಮಾಡಿಕೊಳ್ಳಲಾಯಿತು. ಮನೆಯ ಮುಂದೆ ನಡೆದ ಜನ್ಮದಿನಾಚರಣೆಯಲ್ಲಿ ಗ್ರಾಮದ ನೂರಾರು ರೈತರು, ಅಭಿಮಾನಿಗಳು ಪಾಲ್ಗೊಂಡಿದ್ದರು. ಹೋರಿಗಾಗಿ ತಂದಿದ್ದ ಮಾಲೆಯನ್ನು ಹಾಕಿ 5 ಕೆಜಿ ತೂಕದ ಕೇಕ್ ತಿನ್ನಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹೋರಿಯ ಮಾಲೀಕ ಮಲ್ಲಪ್ಪ, 'ನಮ್ಮದು ಕೃಷಿ ಕುಟುಂಬ. ಜಮೀನಿನಲ್ಲಿ ಉಳುಮೆ ಮಾಡಲು ಹೋರಿ ಬೇಕಾಗಿತ್ತು. ಹೋರಿಯನ್ನು ಖರೀದಿಸಲು ಹೋದಾಗ ಬಸವನಹಳ್ಳಿಯಲ್ಲಿ ನಮಗೆ ಒಂದು ಹೋರಿ ಮಾರಾಟಕ್ಕೆ ಇಟ್ಟಿರುವುದು ಗೊತ್ತಾಯಿತು. ಹೋರಿ ಖರೀದಿ ಮಾಡಿ ಮನೆಗೆ ತಂದ ಮೇಲೆ ಮಕ್ಕಳು ಇದನ್ನು ಕೊಬ್ಬರಿ ಹೋರಿ ಮಾಡುವ ಎಂದರು. ನನಗೇನು ಹೆಚ್ಚು ಆಸಕ್ತಿ ಅಂತಾ ಹೇಳಿದೆ.
ಆದರೆ ಮಕ್ಕಳು ಒಂದು ಸಲ ನೋಡಿಬಿಡುವಾ ಎಂದು ಸ್ಪರ್ಧೆಗೆ ಕರೆದೊಯ್ದರು. ಅಲ್ಲಿಂದ ಕಲ್ಮೇಶ್ವರನ ಹವಾನೇ ಬದಲಾಯ್ತು. ಆಗಿನಿಂದ ನಾನು ಕೇವಲ ಅದನ್ನು ಮಾತ್ರ ಮೇಯಿಸುತ್ತೇನೆ. ಅದಕ್ಕೆ ಹಿಂಡಿ ಹುರುಳಿ ಬೂಸಾ ನೀರು ಸೇರಿದಂತೆ ಎಲ್ಲ ನಾನೇ ನೋಡಿಕೊಳ್ಳುತ್ತೇನೆ. ಮಕ್ಕಳು ಹೋರಿಯನ್ನು ಓಡಿಸುವುದು ಮತ್ತು ಈಜಿಸುವುದನ್ನು ಮಾಡುತ್ತಾರೆ. ಪ್ರಮುಖವಾಗಿ ಪೀಪಿ ಹೋರಿಯಲ್ಲದೆ ಕಂಕರಿ ಹೋರಿ ಇದಾಗಿದ್ದು ಹೆಚ್ಚಿನ ಅಲಂಕಾರ ಮಾಡುತ್ತೇವೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅಭಿಮಾನಿಗಳು ಹೋರಿಯ ಸ್ಟೈಲ್ ಬಗ್ಗೆ ಗುಣಗಾನ ಮಾಡಿದರು. ವಿಶೇಷವೆಂದರೆ ಕಲ್ಮೇಶ್ವರನಿಗೆ ಮದ್ಯಪಾನ ಸೇವಿಸಿದ ವಾಸನೆ ಬಂದರೆ ಸಾಕು ಹಾಯುತ್ತದೆ. ಉಳಿದ ಹೋರಿಗಳಂತೆ ಇದಕ್ಕೆ ಹೆಚ್ಚಿನ ಆಡಂಬರ ಅದ್ಧೂರಿತನ ಬೇಡ. ಅಖಾಡದಲ್ಲಿ ಜಿಗಿಯುವ ಕಲ್ಮೇಶ್ವರ ಕಣ್ಮುಚ್ಚಿ ತೆಗೆಯುವುದರಲ್ಲಿ ಪರಸೆ ದಾಟಿರುತ್ತೆ. ಇಂತಹ ಹೋರಿ ಆರೋಗ್ಯವಾಗಿದ್ದು, ಸದಾಕಾಲ ಆರೋಗ್ಯವಾಗಿರಲಿ ರಾಜ್ಯದಲ್ಲಿ ನಡೆಯುವ ದನಬೆದರಿಸುವ ಸ್ಪರ್ಧೆಯಲ್ಲಿ ಇನ್ನಷ್ಟು ಹೆಸರು ಮಾಡಲಿ ಎಂದು ಅಭಿಮಾನಿಗಳು ಹಾರೈಸಿದರು.
ಈ ವರ್ಷ ಅವಸರ ಅವಸರವಾಗಿ ಜನ್ಮದಿನ ಆಚರಣೆ ಮಾಡಲಾಯಿತು. ಮುಂದಿನ ವರ್ಷಗಳಲ್ಲಿ ರಕ್ತದಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನ್ಮದಿನ ಆಚರಿಸುವ ಚಿಂತನೆ ಇದೆ ಎಂದು ಹೋರಿ ಮಾಲೀಕರು ತಿಳಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಮನೆ ಮೇಲೆಯೇ ಬೈನೆ ಮರ ಬೀಳಿಸಿ ತಿಂದು ಹೋದ ಕಾಡಾನೆಗಳ ಪಡೆ