ಹಾವೇರಿ: ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರಿಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿರುವುದನ್ನು ಇಡೀ ದೇಶವೇ ಸ್ವಾಗತ ಮಾಡಿದೆ ಎಂದು ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಉಳಿಯಬೇಕಾದರೆ ಈ ತೀರ್ಪನ್ನು ಸ್ವಾಗತ ಮಾಡಬೇಕು. ಪಕ್ಷಗಳು ತಪ್ಪು ಮಾಡಬಹುದು. ಆದರೆ, ನ್ಯಾಯಾಲಯ ತಪ್ಪು ಮಾಡುವುದಿಲ್ಲ ಎಂಬುದು ಸಾಬೀತಾಗಿದೆ ಎಂದು ಶಿವಾನಂದ ಪಾಟೀಲ್ ತಿಳಿಸಿದರು.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ 250 ಕೋಟಿ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಕುಮಾರಸ್ವಾಮಿ ವಿದೇಶ ಪ್ರವಾಸ ಮುಗಿಸಿ ಬಂದಿದ್ದಾರೆ. ವಿಮಾನ ನಿಲ್ದಾಣದಿಂದಲೇ ಕುಮಾರಸ್ವಾಮಿ ಆರೋಪಗಳನ್ನು ಹೊರಿಸಲು ಪ್ರಾರಂಭಿಸಲು ಶುರು ಮಾಡಿದರೆ ಕಷ್ಟ ಅಲ್ವಾ. ಪ್ರವಾಸ ಮುಗಿಸಿ ಈಗಷ್ಟೆ ಬಂದಿದ್ದಾರೆ. ಮನೆಗೆ ತಲುಪಿದ ನಂತರ ಹೇಳಿದರೆ ಚೆನ್ನಾಗಿತ್ತು ಎಂದು ಶಿವಾನಂದ ಪಾಟೀಲ್ ವ್ಯಂಗ್ಯವಾಡಿದರು. ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಸರ್ಕಾರದ ಮೇಲೆ ಸಿಟ್ಟಿಗೆ ಕಾರಣ ಏನು ಎಂಬುವ ಕುರಿತಂತೆ ಅವರನ್ನೇ ಕೇಳಬೇಕು ಎಂದು ಶಿವಾನಂದ ಪಾಟೀಲ್ ತಿಳಿಸಿದರು.
ಪಕ್ಷ ಕಟ್ಟಲು ದುಡಿಯುವವರು ಒಬ್ಬರು, ಅಧಿಕಾರ ಅನುಭವಿಸುವವರು ಒಬ್ಬರು ಎಂಬ ಬಸವರಾಜ್ ರಾಯರೆಡ್ಡಿ ಹೇಳಿಕೆಗೆ ಶಿವಾನಂದ ಪಾಟೀಲ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅದರ ಬಗ್ಗೆ ನನಗೆ ಗೊತ್ತಿಲ್ಲ, ಆ ವಿಷಯದ ಬಗ್ಗೆ ಕೇಲಿಲ್ಲ. ಅದರ ಬಗ್ಗೆ ಕಮೆಂಟ್ ಮಾಡಲ್ಲ. ಕಾಂಟ್ರರ್ವಸಿ ಬಗ್ಗೆ ಮಾತಾಡೊಕೆ ಹೋಗೊಲ್ಲ ಎಂದು ಪಾಟೀಲ ತಿಳಿಸಿದರು.
ಹಾವೇರಿಯಲ್ಲಿ ಮೆಡಿಕಲ್ ಕಾಲೇಜು ನೂತನ ಕಟ್ಟಡದಲ್ಲಿ ಪಸ್ಟ್ ಇಯರ್ ಮೆಡಿಕಲ್ ಬ್ಯಾಚ್ ಆರಂಭ ಆಗಬೇಕು. ಹೀಗಾಗಿ ನಾನು ಸಮಸ್ಯೆಗಳ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇನೆ. ಮೆಡಿಕಲ್ ಕಾಲೇಜು ಪ್ರಾರಂಭವಾದರೆ ಜಿಲ್ಲೆಗೆ ಒಳ್ಳೆಯ ಹೆಸರು ಬರುತ್ತದೆ. ಹೆಚ್ಚಿನ ಹಣ ಖರ್ಚು ಮಾಡಿರೋದು ಸಿಎಂ ಗಮನಕ್ಕೆ ಬಂದಿದೆ. ನಾಲ್ಕು ಮೆಡಿಕಲ್ ಕಾಲೇಜುಗಳ ಬಗ್ಗೆ ತನಿಖೆ ಮಾಡ್ತಾ ಇದ್ದಾರೆ. ಅದರಲ್ಲಿ ಹಾವೇರಿ ಮೆಡಿಕಲ್ ಕಾಲೇಜು ಕೂಡಾ ಒಂದು. ಈ ಪ್ರಕರಣವನ್ನು SIT ತನಿಖೆ ಮಾಡೊದು ಬಿಡೋದು ಸಿಎಂ ಹಾಗೂ ಮಂತ್ರಿಯವರಿಗೆ ಬಿಟ್ಟ ವಿಚಾರ ಎಂದು ಸಚಿವ ಶಿವಾನಂದ ತಿಳಿಸಿದರು.
ತನಿಖೆ ಮಾಡುವುದರಲ್ಲಿ ಏನೂ ಸಮಸ್ಯೆ ಇಲ್ಲ. ಆದರೆ, ಕಟ್ಟಡದ ಕಾಮಗಾರಿ ಕೆಲಸಗಳು ನಿಲ್ಲಬಾರದು ಎಂದು ಸಚಿವ ಶಿವಾನಂದ ತಿಳಿಸಿದರು. ಕಾಲೇಜು ಸಿಬ್ಬಂದಿಗೂ ಸಂಬಳ ಕೊಡಿಸುವ ಕೆಲಸ ಮಾಡುತ್ತೇನೆ. ಕಟ್ಟಡ ಕಾಮಗಾರಿ ಕೆಲಸ ಕೂಡಾ ನಿಲ್ಲಲ್ಲ. ಅದರ ಪಾಡಿಗೆ ಅದು ನಡೆಯುತ್ತದೆ ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ಇದನ್ನೂ ಓದಿ: ಎರಡು ತಿಂಗಳಲ್ಲಿ ವರ್ಗಾವಣೆಗಳಿಂದ 500 ಕೋಟಿ ರೂ. ವ್ಯವಹಾರ ಆಗಿದೆ: ಸರ್ಕಾರದ ವಿರುದ್ಧ ಹೆಚ್ಡಿಕೆ ಹೊಸ ಬಾಂಬ್