ರಾಣೆಬೆನ್ನೂರ : ತಾಲೂಕಿನ ರೇಷ್ಮೆ ಬೆಳೆಗಾರರು ಸೇರಿ ರಾಜ್ಯದ ಎಲ್ಲಾ ರೇಷ್ಮೆ ಬೆಳೆಗಾರರಿಗೆ ಸರ್ಕಾರದಿಂದ ಸೂಕ್ತ ಬೆಂಬಲ ಬೆಲೆ ಕೊಡಿಸಲಾಗುವುದು ಎಂದು ಸಚಿವ ಆರ್ ಶಂಕರ್ ಭರವಸೆ ನೀಡಿದರು.
ತಾಲೂಕಿನ ಚಳಗೇರಿ ಗ್ರಾಮದಲ್ಲಿ ರಾಜ್ಯ ರೇಷ್ಮೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ರೇಷ್ಮೆ ಬೆಳೆ ವೀಕ್ಷಣೆ ಮಾಡಿದ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ರಾಮನಗರ ಜಿಲ್ಲೆ ರೇಷ್ಮೆ ಮುಖ್ಯ ಮಾರುಕಟ್ಟೆ ಕೇಂದ್ರವಾಗಿದೆ. ಅದನ್ನು ಹೊರತು ಪಡಿಸಿ ರಾಜ್ಯದ ಇತರೆ ಭಾಗಗಳಲ್ಲಿ ರೇಷ್ಮೆ ಮಾರುಕಟ್ಟೆ ತೆರೆಯಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ರೇಷ್ಮೆ ಬೆಳೆಗಾರರ ಹಿತದೃಷ್ಟಿಯಿಂದ ಅವರಿಗೆ ಬೆಂಬಲ ಬೆಲೆ ಹಾಗೂ ಸಬ್ಸಿಡಿ ಮೊತ್ತವನ್ನು ಹೆಚ್ಚಿಗೆ ಮಾಡಲು ಈಗಾಗಲೇ ಸಿಎಂ ಜತೆ ಚರ್ಚೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ಕಾರ್ಯರೂಪಕ್ಕೆ ತರಲಾಗುತ್ತದೆ ಎಂದು ರೈತರಿಗೆ ಭರವಸೆ ನೀಡಿದರು.
ಅಧಿಕಾರಿಗಳ ಜತೆ ರೈತರ ಚರ್ಚೆ : ಬೆಂಗಳೂರಿನಿಂದ ಆಗಮಿಸಿದ ರೇಷ್ಮೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚಳಗೇರಿ ರೈತರು ಚರ್ಚೆ ನಡೆಸಿದರು. ರೇಷ್ಮೆ ಬೆಳೆಯುವ ಹಂತಗಳು ಹಾಗೂ ಹುಳುಗಳ ಸಂರಕ್ಷಣೆ ಯಾವ ರೀತಿ ಮಾಡಬೇಕು ಎಂಬುದನ್ನು ಅಧಿಕಾರಿಗಳು ರೈತರಿಗೆ ತಿಳಿಸಿದರು. ಅಲ್ಲದೆ ರೈತರು ರೇಷ್ಮೆ ಹೆಚ್ಚಿನ ಪ್ರದೇಶಗಳಲ್ಲಿ ಬೆಳೆಯುವ ಮೂಲಕ ವರ್ಷದಲ್ಲಿ ಅಧಿಕ ರೇಷ್ಮೆ ಉತ್ಪಾದನೆಗೆ ಮುಂದಾಗಬೇಕು ಎಂದು ತಿಳಿಸಿದರು.