ಕಾರವಾರ: ಗರ್ಭಕೋಶ ಒಡೆದು ಪ್ರಾಣಾಪಾಯದಲ್ಲಿದ್ದ ಕೊರೊನಾ ಸೋಂಕಿತ ಮಹಿಳೆಗೆ ಯಶಸ್ವಿಯಾಗಿ ಹೆರಿಗೆ ಮಾಡಿರುವ ಕ್ರಿಮ್ಸ್ ಆಸ್ಪತ್ರೆ ವೈದ್ಯರು, ತಾಯಿ ಮಗುವನ್ನು ಬದುಕಿಸಿದ್ದಾರೆ.
ದಾಂಡೇಲಿ ಮೂಲದ ಕೊರೊನಾ ಸೋಂಕಿತ ಗರ್ಭಿಣಿಯನ್ನು ದಾಂಡೇಲಿ ಆಸ್ಪತ್ರೆಯಿಂದ ಆ.1 ರಂದು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತಲ್ಕರ್ ಪರೀಕ್ಷಿಸಿ, ಈ ಹಿಂದೆ ಸಿಜೆರಿಯನ್ ಮುಖಾಂತರ ಹೆರಿಗೆಯಾಗಿದ್ದರಿಂದ ಈಗ ಗರ್ಭಕೋಶ ಸೀಳಿ ಮಗು ಮತ್ತು ತಾಯಿಯ ಜೀವಕ್ಕೆ ಅಪಾಯವಿದ್ದು, ಕೂಡಲೇ ತುರ್ತು ಚಿಕಿತ್ಸೆಯನ್ನು ಕೈಗೊಳ್ಳಲು ತೀರ್ಮಾನಿಸಿದರು.
ಮಗುವಿನ ಕುತ್ತಿಗೆಯ ಸುತ್ತ ಹೊಕ್ಕಳು ಬಳ್ಳಿ ಸುತ್ತಿಕೊಂಡಿದ್ದು, ಅರವಳಿಕೆ ತಜ್ಞರಾದ ಡಾ.ಎಸ್.ಬಿ.ಕಡೂರ, ಚಿಕ್ಕ ಮಕ್ಕಳ ತಜ್ಞರಾದ ಡಾ.ವಿಶ್ವನಾಥ ಹಾಗೂ ಶುಶ್ರೂಶಕಿಯರಾದ ಬಿ.ಎಸ್.ಗೌರಿ, ಶ್ರೀಶಾ ವೈದ್ಯರ ತಂಡವು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಪೂರೈಸಿದ್ದಾರೆ. ಸುಮಾರು ರಾತ್ರಿ 10.30ರ ವೇಳೆ ಆಕೆಯು ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ.
ಅರವಳಿಕೆ ತಜ್ಞರಾದ ಡಾ.ಮಂಜುನಾಥ ಭಟ್ ಸೂಕ್ತ ಸಲಹೆ ನೀಡಿ, ಸಹಕರಿಸಿದ್ದಾರೆ. ಕೊರೊನಾ ಸೋಂಕಿತರಿಗೆ ಆರೈಕೆ ಮಾಡಲು ಹಿಂಜರಿಯುವ ಈ ಸಂದರ್ಭದಲ್ಲಿ ಗರ್ಭಿಣಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಗಿದ್ದು, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಸಂಸ್ಥೆಯ ನಿರ್ದೆಶಕ ಗಜಾನನ ನಾಯ್ಕ ಅಭಿನಂದಿಸಿದ್ದಾರೆ.