ಹಾವೇರಿ: ತಾಲೂಕಿನ ಬಸಾಪುರದ ನಾಗಪ್ಪ ಮುದ್ದಿ ಒಂದು ಕಾಲದಲ್ಲಿ ಕುರಿಗಳ ಹಿಂಡನ್ನೇ ನಂಬಿ ಜೀವನ ಸಾಗಿಸುತ್ತಿದ್ದ ವ್ಯಕ್ತಿ. ಆರಂಭದಲ್ಲಿ ಕುರಿಗಳಿಗೆ ಕಾಣಿಸಿಕೊಳ್ಳುತ್ತಿದ್ದ ರೋಗಗಳಿಂದ ಬೇಸತ್ತು ನಾಗಪ್ಪ ಕೃಷಿ ಕಡೆ ಮುಖ ಮಾಡಿದರು. ಆ ಬಳಿಕ ಅವರು ಮತ್ತೆ ಹಿಂತಿರುಗಿ ನೋಡಲಿಲ್ಲ. ಹೌದು ಆರಂಭದಲ್ಲಿ ಕುರಿಗಳನ್ನು ಮಾರಿ ಏಳು ಎಕರೆ ಜಮೀನಿನಲ್ಲಿ ಮಾವು ಕೃಷಿ ಆರಂಭಿಸಿದ ನಾಗಪ್ಪ ಮುದ್ದಿ ಈಗ 30 ಎಕರೆ ವಿಸ್ತಿರ್ಣದಲ್ಲಿ ಮಾವು ಬೆಳೆಯುತ್ತಿದ್ದಾರೆ.
ನಾಗಪ್ಪ ಮುದ್ದಿ ಸದ್ಯ ಹಾವೇರಿ ಜಿಲ್ಲೆಯಲ್ಲಿ ಸಾವಯವ ಪದ್ದತಿಯಲ್ಲಿ ಅತಿಹೆಚ್ಚು ಮಾವು ಬೆಳೆಯುವ ರೈತ. ನಾಗಪ್ಪ ಮುದ್ದಿ ಮಾವನ್ನ ಸಾವಯವ ಕೃಷಿಯಲ್ಲಿ ಬೆಳೆಯುತ್ತಿದ್ದಾರೆ. ಮಾವಿನ ಗಿಡಗಳ ನೆಡುವಿಕೆಯಿಂದ ಹಿಡಿದು ಮಾವಿನ ಹಣ್ಣಾಗುವವರೆಗೂ ಸಾವಯವ ಪದ್ದತಿಯನ್ನೇ ಅನುಸರಿಸುತ್ತಿದ್ದಾರೆ. ನೈಸರ್ಗಿಕವಾಗಿ ಮಾವಿನಕಾಯಿ ಹಣ್ಣು ಮಾಡುವುದರಿಂದ ಇವರ ಮಾವು ಕೊಳ್ಳಲು ಜನ ಮುಗಿಬೀಳುತ್ತಾರೆ. ಪರಿಣಾಮ ವರ್ಷದಿಂದ ವರ್ಷಕ್ಕೆ ನಾಗಪ್ಪ ಮುದ್ದಿ ಮಾವು ಪ್ರಸಿದ್ಧಿಯಾಗುತ್ತಿದೆ.
ಜೊತೆ ಜೊತೆಗೆ ನಾಗಪ್ಪ ಮುದ್ದಿಯ ಆದಾಯ ಸಹ ಹೆಚ್ಚಾಗುತ್ತಿದೆ. ಮಾವು ಜೊತೆಗೆ ಸೆಣಬು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ನಾಗಪ್ಪ ಮುದ್ದಿ ಅದರಲ್ಲೂ ಸಹ ಆದಾಯ ಗಳಿಸುತ್ತಿದ್ದಾನೆ. ಪ್ರಸ್ತುತ ವರ್ಷ ಕೊರೊನಾ ಕರಿ ನೆರಳಿದ್ದರೂ ಸಹ ಬಸಾಪುರದ ನಾಗಪ್ಪ ಮುದ್ದಿ ಮಾವಿಗೆ ಯಾವುದೇ ಪರಿಣಾಮ ಬೀರಿಲ್ಲ. ಗ್ರಾಹಕರು ನಾಗಪ್ಪ ಮುದ್ದಿ ತೋಟಕ್ಕೆ, ಮನೆಗೆ, ಅಂಗಡಿಗೆ ಬಂದು ಖರೀದಿ ಮಾಡುತ್ತಿದ್ದಾರೆ.
ಇದಲ್ಲದೇ ಕೆಲವು ಕೈಗಾರಿಕೆಗಳಿಗೆ ಸಹ ನಾಗಪ್ಪ ಮುದ್ದಿ ಮಾವು ಪೂರೈಸುತ್ತಿದ್ದಾನೆ. ಜೊತೆ ಜೊತೆಗೆ ಮಾವಿನ ಹಣ್ಣಿನ ಪಲ್ಪ್ ಸೇರಿದಂತೆ ವಿವಿಧ ಉಪ - ಉತ್ಪನ್ನಗಳನ್ನು ನಾಗಪ್ಪ ಮುದ್ದಿ ಸಿದ್ದಪಡಿಸುತ್ತಿದ್ದಾನೆ. ಆರಂಭದಲ್ಲಿ ನಾಗಪ್ಪ ಮುದ್ದಿ ಮಾವು ಬೆಳೆಯಲು ಮುಂದಾಗಿದ್ದಾಗ ಅಪಸ್ವರ ಎತ್ತಿದ ಜನರೇ ನಾಗಪ್ಪ ಮುದ್ದಿ ಸಾಧನೆಯ ಗುಣಗಾನ ಮಾಡುತ್ತಿದ್ದಾರೆ. ಜೊತೆಗೆ ಜಿಲ್ಲೆಯ ವಿವಿಧ ರೈತರು ನಾಗಪ್ಪ ಮುದ್ದಿ ಅವರನ್ನ ಮಾದರಿ ರೈತ ಎಂದು ಗುರುತಿಸಿದ್ದು, ನಾಗಪ್ಪನ ತೋಟಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ತೋಟಗಾರಿಕಾ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ ಮತ್ತು ಮಾವು ಕುರಿತಂತೆ ನನಗಿದ್ದ ಶ್ರದ್ಧೆ ನನ್ನ ಈ ಸಾಧನೆಗೆ ಕಾರಣ ಎನ್ನುತ್ತಿದ್ದಾರೆ ನಾಗಪ್ಪ ಮುದ್ದಿ.