ಹಾವೇರಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾರ್ಚ್.08ರಂದು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದು, ಜನರು ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಅದರಂತೆ ಜಿಲ್ಲೆಯ ಜನರು ಕೂಡ ಕೆಲವೊಂದು ಬೇಡಿಕೆ ಇಟ್ಟಿದ್ದಾರೆ.
ಮೇಘಾಡೈರಿ ಮತ್ತು ಡಿಸಿಸಿ ಬ್ಯಾಂಕ್ನ ಜಿಲ್ಲಾ ಶಾಖೆ ಮಾಡಬೇಕು ಎನ್ನುವುದು ಜಿಲ್ಲೆಯ ಜನರ ಪ್ರಮುಖ ಬೇಡಿಕೆಯಾಗಿದೆ. ಈ ಎರಡು ಬೇಡಿಕೆಗಳನ್ನು ಈಗಾಗಲೇ ಸಿಎಂ ಬಿ.ಎಸ್.ಯಡಿಯೂರಪ್ಪ ಗಮನಕ್ಕೆ ತರಲಾಗಿದೆ. ಪ್ರಸ್ತುತ ಬಜೆಟ್‌ನಲ್ಲಿ ಈ ಎರಡು ಬೇಡಿಕೆಗಳು ಈಡೇರಿಲಿವೆ ಎಂದು ಶಾಸಕ ನೆಹರು ಓಲೇಕಾರ್ ತಿಳಿಸಿದರು.
ಈ ಕುರಿತಂತೆ ಈಗಾಗಲೇ ಸಚಿವರ ಜೊತೆ ಚರ್ಚಿಸಲಾಗಿದೆ. ಇದರ ಜೊತೆಗೆ ಹಾವೇರಿಯನ್ನು ಸಾಹಿತಿಗಳ ನಗರಿ ಎಂದು ಕರೆಯಬೇಕು ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚು ಆದ್ಯತೆ ನೀಡಬೇಕು.ಈ ಬೇಡಿಕೆಗಳನ್ನು ಸಿಎಂ ಬಜೆಟ್‌ನಲ್ಲಿ ಈಡೇರಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಜನಸಾಮಾನ್ಯರ ಬಜೆಟ್ ಆಗಬೇಕು:
ಈ ಬಾರಿಯ ಮಂಡನೆಯಾಗಲಿರುವ ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಹೆಚ್ಚಿ ಅನುಕೂಲ ಒದಗಿಸಬೇಕು. ಕೇವಲ ಒಂದು ವಲಯ ಶ್ರೀಮಂತವರ್ಗ ಓಲೈಸುವ ಬಜೆಟ್ ಆಗಬಾರದು. ಐಷಾರಾಮಿ ವಸ್ತುಗಳಿಗೆ ಬೇಕಾದರೆ ತೆರಿಗೆ ಹೆಚ್ಚು ಮಾಡಲಿ, ಆದರೆ ಬಡವರ್ಗ ಬಳಿಸುವ ವಸ್ತುಗಳ ಬೆಲೆ ಕಡಿಮೆಯಾಗಬೇಕು ಎಂದು ಹಾವೇರಿ ಹಿರಿಯ ಪತ್ರಕರ್ತ ಮಾಲತೇಶ್ ಅಂಗೂರ್ ಅಭಿಪ್ರಾಯ ಪಟ್ಟಿದ್ದಾರೆ.
ಹಾವೇರಿ ಜಿಲ್ಲೆಯಾಗಿ ಎರಡು ದಶಕ ಪೂರೈಸಿದೆ. ಆದರೆ ದುರಂತ ಅಂದರೆ ಜಿಲ್ಲೆಯಲ್ಲಿ ಕೈಗಾರಿಕೆ ಇಲ್ಲ. ಜಿಲ್ಲೆಗೆ ಹೇಳಿಕೊಳ್ಳುವಂತ ಕಾರ್ಖಾನೆ ಸ್ಥಾಪನೆಯಾಗಿ ಸ್ಥಳೀಯರಿಗೆ ಉದ್ಯೋಗ ಸಿಗುವಂತಾಗಬೇಕು. ಬಜೆಟ್‌ನಲ್ಲಿ ಪ್ರತಿವರ್ಷ ಮೆಣಸಿನಕಾಯಿ ಸಂಸ್ಕರಣ ಘಟಕ ಘೋಷಣೆಯಾಗುತ್ತದೆ. ಆದರೆ ಸ್ಥಾಪನೆಯಾಗಿಲ್ಲ. ಈ ವರ್ಷವಾದರೂ ಮೆಣಸಿನಕಾಯಿ ಸಂಸ್ಕರಣ ಘಟಕ ಸ್ಥಾಪನೆಯಾಗಬೇಕು ಎಂದರು.
ಓದಿ: ವಿಶ್ವಪ್ರಿಯ ಫೈನಾನ್ಸ್ ವಂಚನೆ ಕೇಸ್: ಸಿಬಿಐ ತನಿಖೆ ಕೋರಿದ ಅರ್ಜಿ, ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ರಾಜ್ಯದಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು ಮೆಕ್ಕೆಜೋಳ ಬೆಳೆಯಲಾಗುತ್ತದೆ. ಆದರೆ ಇಲ್ಲಿ ಸರ್ಕಾರದಿಂದ ಮೆಕ್ಕೆಜೋಳ ಪಾರ್ಕ್ ನಿರ್ಮಾಣವಾಗಿಲ್ಲ. ಸರ್ಕಾರ ಮೆಕ್ಕೆಜೋಳ ಪಾರ್ಕ್ ಮತ್ತು ಅದರ ಉತ್ಪನ್ನಗಳ ತಯಾರಿಕೆ ಪ್ರೋತ್ಸಾಹ ನೀಡಬೇಕು. ಕಬ್ಬು ಬೆಳೆಯುವಲ್ಲಿ ಸಹ ಜಿಲ್ಲೆಯ ಮೂರನೇಯ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಆಲೆ ಮನೆಗಳು ತಲೆ ಎತ್ತಲಾರಂಭಿಸಿವೆ. ಸರ್ಕಾರ ಇವುಗಳಿಗೆ ಹೆಚ್ಚು ಉತ್ತೇಜನ ನೀಡುವಂತೆ ಅಂಗೂರ್ ಆಗ್ರಹಿಸಿದ್ದಾರೆ.