ಹಾವೇರಿ: ಸರ್ಕಾರಕ್ಕೆ 136 ಕಾಂಗ್ರೆಸ್ ಶಾಸಕರ ಬಲವಿದೆ. ಹೀಗಾಗಿ ಸರ್ಕಾರ ಬೀಳಿಸಲು ಯಾವುದೇ ಪ್ರಯತ್ನ ಮಾಡಿದರೂ ಅದು ಸಫಲವಾಗುವುದಿಲ್ಲ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹೇಳಿದರು.
ಹಾವೇರಿಯಲ್ಲಿ ಸೋಮವಾರ ಮೆಡಿಕಲ್ ಕಾಲೇಜ್ ಕಾಮಗಾರಿ ವೀಕ್ಷಿಸಿದ ಅವರು, ನಮ್ಮ ಸರ್ಕಾರ ಕೆಡವಲು ಸಿಂಗಾಪುರದಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ರಾಜ್ಯದ ಜನ ಕಾಂಗ್ರೆಸ್ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ಸಿಗೆ ಬೆಂಬಲ ಸಿಗಲಿದೆ. ಈಗಾಗಲೇ ಘೋಷಣೆ ಮಾಡಿದಂತೆ ನಾಲ್ಕನೇ ಗ್ಯಾರಂಟಿ ಸಹ ಜಾರಿಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆ ಕುರಿತಂತೆ ಬಿಜೆಪಿ ಮುಖಂಡರ ಟೀಕೆಗೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಕುಮಾರಸ್ವಾಮಿ ಮತ್ತು ಬಸವರಾಜ್ ಬೊಮ್ಮಾಯಿ ಕೂಡಿದರೆ ನಮಗೇಕೆ ಭಯ? ಎಂದರು.
ಇದನ್ನೂ ಓದಿ: ಸಿಂಗಾಪುರದಲ್ಲಿ ಕುಳಿತು ಸರ್ಕಾರ ಬೀಳಿಸುವ ಪಿತೂರಿ ಬಗ್ಗೆ ನಮಗೂ ಮಾಹಿತಿ ಇದೆ: ಡಿ ಕೆ ಶಿವಕುಮಾರ್
ಸಿಎಂ ಸಿದ್ದರಾಮಯ್ಯ ಮಂಗಳವಾರ ಹಾವೇರಿ ಜಿಲ್ಲೆ ಪ್ರವಾಸ ಮಾಡಲಿದ್ದಾರೆ ಎಂದು ಇದೇ ವೇಳೆ ಸಚಿವರು ತಿಳಿಸಿದರು. ಜಿಲ್ಲೆಯ ಸಮಸ್ಯೆಗಳ ಕುರಿತಂತೆ ಹಾವೇರಿ ಶಾಸಕರು ಮತ್ತು ನಾನು ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದೆವು. ಅಂದು ಅವರು ನಾನೇ ಬಂದು ಅಧಿಕಾರಿಗಳ ಸಭೆ ಮಾಡುವುದಾಗಿ ತಿಳಿಸಿದ್ದರು. ಅದರಂತೆ ಸಿಎಂ ಮಂಗಳವಾರ ಹಾವೇರಿಗೆ ಆಗಮಿಸಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ನೀರಾವರಿ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಿಎಂ ಮುಂದೆ ಪ್ರಸ್ತಾಪ ಮಾಡಿದ್ದೆವು. ಹಾವೇರಿಗೆ ಬಿಡುಗಡೆಯಾಗಿರುವ ಮೆಡಿಕಲ್ ಕಾಲೇಜ್ ಕಾಮಗಾರಿ ಪ್ರಗತಿಯಲ್ಲಿದ್ದು ಕಾಮಗಾರಿ ಆದಷ್ಟು ಬೇಗ ಮುಗಿಸಿ ಕಾರ್ಯಾರಂಭ ಮಾಡಬೇಕು ಎನ್ನುವುದು ನಮ್ಮ ಆಶಯ ಎಂದರು.
ಡಿ.ಕೆ.ಶಿವಕುಮಾರ್ ಹೇಳಿದ್ದೇನು?: ಸೋಮವಾರ ತಮ್ಮ ನಿವಾಸದ ಮುಂದೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಡಿಸಿಎಂ ಡಿಕೆಶಿ, "ನಮ್ಮ ಸರ್ಕಾರದ ವಿರುದ್ಧ ಕೆಲವರು ಪಿತೂರಿ ನಡೆಸುತ್ತಿದ್ದಾರೆ. ಇದಕ್ಕಾಗಿ ಸಿಂಗಾಪುರದಲ್ಲಿ ತಂತ್ರ ಮಾಡುತ್ತಿದ್ದಾರೆ. ಈ ಕುರಿತು ನಮ್ಮದೇ ಆದ ಮೂಲಗಳಿಂದ ಮಾಹಿತಿ ಇದೆ. ಯಾರು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ಬೆಂಗಳೂರಿನಲ್ಲಿ ಆಪರೇಷನ್ ಮಾಡಿದ್ರೆ ಗೊತ್ತಾಗುತ್ತದೆ ಅಂತ ಈಗ ಸಿಂಗಾಪುರದಲ್ಲಿ ಕುಳಿತು ಆಪರೇಷನ್ ಮಾಡುತ್ತಿದ್ದಾರೆ" ಎಂದು ಹೇಳಿದ್ದರು.
ಇದನ್ನೂ ಓದಿ: ರಾಜ್ಯದಲ್ಲಿ ಮಳೆ - ಬೆಳೆ ಪರಿಸ್ಥಿತಿ : ಜುಲೈ 26 ರಂದು ಜಿಲ್ಲಾಡಳಿತದೊಂದಿಗೆ ಸಿಎಂ ವಿಡಿಯೋ ಸಂವಾದ