ಹಾವೇರಿ: ಜಿಲ್ಲೆಯ ಹಿರೇಕೆರೂರು ಪೊಲೀಸ್ ಠಾಣೆಯ ಪಿಎಸ್ಐ ದೀಪು ಎಂ.ಟಿ. ಅವರು ಗರ್ಭಿಣಿಯಾಗಿದ್ದರೂ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಮಾದರಿಯಾಗಿದ್ದಾರೆ.
ಏಳು ತಿಂಗಳು ಗರ್ಭಿಣಿಯಾಗಿರುವ ದೀಪು ಇಲ್ಲಿಯವರೆಗೆ ಯಾವುದೇ ರಜೆಗಳನ್ನ ಹಾಕದೆ ಕರ್ತವ್ಯನಿಷ್ಠೆ ಮೆರೆದಿದ್ದಾರೆ. ಪ್ರತಿದಿನ ಡ್ಯೂಟಿಗೆ ಬಂದು ಕಚೇರಿಯ ಎಲ್ಲ ಕಡತಗಳನ್ನು ಪರಿಶೀಲನೆ ಮಾಡುತ್ತಾರೆ. ಸ್ಟೇಷನ್ ಸಿಬ್ಬಂದಿ ಜೊತೆ ಪ್ರಸ್ತುತ ಪರಿಸ್ಥಿತಿ ಕುರಿತ ಮಾಹಿತಿ ಪಡೆಯುತ್ತಾರೆ. ಜೀಪ್ ಹತ್ತಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾರೆ. ಕೈಯಲ್ಲಿ ಮೈಕ್ ಹಿಡಿದು ಅವಧಿ ಮುಗಿದ ಮೇಲೂ ತೆರೆದ ಅಂಗಡಿಗಳನ್ನು ಬಂದ್ ಮಾಡಿಸುತ್ತಾರೆ.
ಕೊರೊನಾ ಕುರಿತಂತೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡುತ್ತಾರೆ. ಸರ್ಕಾರ ಜಾರಿಗೆ ತಂದಿರುವ ನಿಯಮಗಳನ್ನು ಪಾಲಿಸುವಂತೆ ಸಲಹೆ ನೀಡುತ್ತಾರೆ. ಬೆಳಗ್ಗೆ 10 ಗಂಟೆ ನಂತರ ರಸ್ತೆಗೆ ಇಳಿಯುವ ದೀಪು ದ್ವಿಚಕ್ರ ವಾಹನ ಸೇರಿದಂತೆ ಬಹುತೇಕ ವಾಹನಗಳ ತಪಾಸಣೆ ನಡೆಸುತ್ತಾರೆ. ಅವರ ಹತ್ತಿರ ಸಂಬಂಧಪಟ್ಟ ಪಾಸ್ ಇದ್ದರೆ ಮಾತ್ರ ಸಂಚರಿಸಲು ಅನುಮತಿ ನೀಡುತ್ತಾರೆ. ಇಲ್ಲದಿದ್ದರೆ ವಾಹನ ಸೀಜ್ ಮಾಡುವುದು ಪಕ್ಕಾ.
ಕೊರೊನಾಗೆ ಹೆದರಿ ಜನರು ಮನೆಯಲ್ಲಿರುವ ಈ ದಿನಗಳಲ್ಲಿ, ಗರ್ಭಿಣಿಯಾಗಿರುವ ದೀಪು ಕೊರೊನಾ ಭಯ ಮರೆತು ಕರ್ತವ್ಯ ನಿರ್ವಹಿಸುತ್ತಿರುವುದು ಉಳಿದ ಅಧಿಕಾರಿಗಳಿಗೆ ಮಾದರಿಯಾಗಿದೆ. ವೈದ್ಯರ ಸಲಹೆ ಪಡೆದಿರುವ ದೀಪುಗೆ ಆಗಸ್ಟ್ 21ಕ್ಕೆ ಹೆರಿಗೆಯ ದಿನಾಂಕ ನೀಡಲಾಗಿದೆ. ತನಗೆ ಎಲ್ಲಿಯವರೆಗೆ ಕರ್ತವ್ಯನಿರ್ವಹಿಸಲು ಸಾಧ್ಯವಾಗುತ್ತೊ, ಅಲ್ಲಿಯವರೆಗೆ ಕರ್ತವ್ಯ ನಿರ್ವಹಿಸುತ್ತೇನೆ ಎನ್ನುತ್ತಾರೆ ಪಿಎಸ್ಐ ದೀಪು.
ಓದಿ: ಕೋವಿಡ್ ಪರಿಸ್ಥಿತಿ ಎದುರಿಸಲು ಕೈಗಾರಿಕೆಗಳಿಂದ ಮೈಸೂರು ಜಿಲ್ಲಾಡಳಿತಕ್ಕೆ 12.53 ಕೋಟಿ ರೂ. ನೆರವು