ಹಾವೇರಿ:ಜಿಲ್ಲೆಯ ಮೆಡಿಕಲ್ ಶಾಪ್, ಕಿರಾಣಿ ಅಂಗಡಿ, ತರಕಾರಿ ಅಂಗಡಿ ಸೇರಿದಂತೆ ಎಂಟು ಅಂಗಡಿಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಹಾನಗಲ್ ತಾಲೂಕಿನ ಅಕ್ಕಿ ಆಲೂರು ಮತ್ತು ಹಾನಗಲ್ ಪಟ್ಟಣದಲ್ಲಿ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಹಾನಗಲ್ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಗಳು ನಡೆದಿವೆ.
ಮೊದಲು ನಾಲ್ಕು ಅಂಗಡಿಗಳಿಗೆ ಕನ್ನ ಹಾಕಿರುವ ಖದೀಮರಿಗೆ ಏನೂ ಸಿಕ್ಕಿಲ್ಲ. ಉಳಿದ ನಾಲ್ಕು ಅಂಗಡಿಗಳಲ್ಲಿ ಸಿಕ್ಕ 5 ಸಾವಿರ ಹಣವನ್ನ ಕಳ್ಳರು ಬಾಚಿಕೊಂಡು ಹೋಗಿದ್ದಾರೆ. ಎಂಟು ಅಂಗಡಿಗಳ ಪೈಕಿ ಒಂದು ಅಂಗಡಿಯಲ್ಲಿರುವ ಸಿಸಿಟಿವಿ ಕ್ಯಾಮರಾದಲ್ಲಿ ಕಳ್ಳರ ಕೃತ್ಯ ಸೆರೆಯಾಗಿದೆ. ಬಹುತೇಕ ಮುಂಜಾನೆ ಈ ಕೃತ್ಯ ಎಸಗಿರಬಹುದು ಎಂದು ಅಂದಾಜಿಸಲಾಗಿದೆ. ಕಳ್ಳತನ ನಡೆದ ಸ್ಥಳಗಳಿಗೆ ಪಿಎಸ್ಐ ಶ್ರೀಶೈಲ್ ಪಟ್ಟಣಶೆಟ್ಟಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನುರಿತ ಕಳ್ಳರ ಗುಂಪು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕಳ್ಳತನವಾದ ಸ್ಥಳಗಳಲ್ಲಿ ಬೆರಳಚ್ಚು ತಜ್ಞರು ಸೇರಿದಂತೆ ಶ್ವಾನದಳದ ಸಹಾಯ ತಗೆದುಕೊಂಡು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಅಂಗಡಿಗಳು ಬಂದ್ ಆಗಿದ್ದವು. ಲಾಕ್ಡೌನ್ ತೆರವು ಮಾಡಿದ ಬಳಿಕ ಇತ್ತೀಚೆಗೆ ಅಂಗಡಿಗಳು ಮತ್ತೆ ಬಾಗಿಲು ತೆರೆದಿದ್ದವು. ಅಷ್ಟರಲ್ಲಿ ಈ ರೀತಿ ಕಳ್ಳತನ ಮಾಡಿರುವದಕ್ಕೆ ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಇಲಾಖೆ ತಮ್ಮ ಅಂಗಡಿಗಳಿಗೆ ಸೂಕ್ತ ಭದ್ರತೆ ನೀಡಬೇಕು. ನಗರಗಳಲ್ಲಿ ನೈಟ್ ಬೀಟ್ ಎಚ್ಚು ಮಾಡಬೇಕು ಎಂದು ವ್ಯಾಪಾರಿಗಳು ಒತ್ತಾಯಿಸಿದ್ದಾರೆ.