ಹಾವೇರಿ: ಕೊರೊನಾ ಸಂಭಾವ್ಯ ಮೂರನೇಯ ಅಲೆ ಎದುರಿಸಲು ಹಾವೇರಿ ಜಿಲ್ಲಾಡಳಿತ ಸನ್ನದ್ಧವಾಗುತ್ತಿದೆ. ಮೂರನೇಯ ಅಲೆ ಚಿಕ್ಕಮಕ್ಕಳಿಗೆ ಬರುವ ಸಾಧ್ಯತೆ ಇರುವ ಕಾರಣ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳಿಗಾಗಿ ಪ್ರತ್ಯೇಕವಾಗಿ ಎರಡು ಕೋವಿಡ್ ವಾರ್ಡ್ ಸಿದ್ದಪಡಿಸಲಾಗಿದೆ. 2 ವಾರ್ಡ್‌ಗಳಲ್ಲಿ 15 ತಲಾ ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಪಿ.ಆರ್.ಹಾವನೂರು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ವಾರ್ಡ್‌ಗಳಲ್ಲಿ ಮಕ್ಕಳಿಗೆ ಬೇಸರವಾಗದಂತೆ ಗೋಡೆ ಮೇಲೆ ಚೋಟಾ ಬೀಮ್ ಸೇರಿದಂತೆ ವಿವಿಧ ಆಕರ್ಷಕ ಚಿತ್ರಗಳನ್ನು ಬರೆಯಲಾಗಿದೆ. ಮೂರನೇ ಅಲೆ ಎದುರಿಸುವ ಸಲುವಾಗಿ ಜಿಲ್ಲಾಸ್ಪತ್ರೆಯಲ್ಲಿರುವ ಚಿಕ್ಕಮಕ್ಕಳ ತಜ್ಞರಿಗೆ ಆನ್ಲೈನ್ನಲ್ಲಿ ತರಬೇತಿ ನೀಡಲಾಗುತ್ತಿದೆ.
ಮೂವತ್ತು ಬೆಡ್‌ಗಳಿಗೂ ಸಹ ಆಮ್ಲಜನಕದ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ, ಮಕ್ಕಳಿಗಾಗಿ ಐದು ಪಿಡಿಯಾಟ್ರಿಕ್ಸ್ ವೆಂಟಿಲೇಟರ್ ಮತ್ತು ಐಸಿಯು ಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಡಳಿತ ಕೂಡ ಮೂರನೇ ಅಲೆ ಎದುರಿಸಲು ಬೇಕಾಗುವ ಉಪಕರಣಗಳನ್ನ ನೀಡುವುದಾಗಿ ಭರವಸೆ ನೀಡಿರುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಇದುವರೆಗೊ ಚಿಕ್ಕಮಕ್ಕಳಲ್ಲಿ ಕೋವಿಡ್ ಕಾಣಿಸಿಕೊಂಡಿಲ್ಲ. ಆದರೂ ಚಿಕ್ಕಮಕ್ಕಳಿಗೆ ಕೋವಿಡ್ ಬಂದ ತಕ್ಷಣ ನೀಡಬಹುದಾದ ಔಷಧಗಳನ್ನು ಸಂಗ್ರಹಿಸಿಡಲಾಗಿದೆ. ಪಿಡಿಯಾಟ್ರಿಕ್ಸ್ ವೆಂಟಿಲೇಟರ್, ಪಿಡಿಯಾಟ್ರಿಕ್ ಐಸಿಯು ನೋಡಿಕೊಳ್ಳಲು ಹೆಚ್ಚಿನ ತಜ್ಞರು ಬೇಕಾಗಿದ್ದಾರೆ. ಜೊತೆಗೆ ನರ್ಸ್ಗಳು ಹಾಗೂ ನುರಿತ ವೈದ್ಯರು ಬೇಕು. ಜಿಲ್ಲಾಡಳಿತ ಮಾನವ ಸಂಪನ್ಮೂಲ ಒದಗಿಸುವ ಭರವಸೆ ನೀಡಿದೆ. ಈಗಾಗಲೇ 12 ಎಂಬಿಬಿಎಸ್ ವೈದ್ಯರ ನೇಮಕ ಮಾಡಿಕೊಳ್ಳಲಾಗಿದೆ ಎಂದು ಹಾವನೂರು ಮಾಹಿತಿ ನೀಡಿದರು.
ಇದನ್ನೂ ಓದಿ: Bigg Boss: ನಿನ್ನ ಫ್ಯಾನ್ಸ್ Vote ಮಾಡುವುದಿಲ್ಲ, ನಾನು ಹೊರಗೆ ಹೋಗುತ್ತೇನೆ ಎಂದ ದಿವ್ಯಾ ಸುರೇಶ್