ಹಾವೇರಿ : ದೇಶದಲ್ಲಿ ಕರ್ನಾಟಕ ಭ್ರಷ್ಟಾಚಾರ ರಾಜಧಾನಿಯಾಗಿದೆ. ಭ್ರಷ್ಟಾಚಾರ ಬಗ್ಗೆ ಮಾತನಾಡುವ ನೈತಿಕತೆಯನ್ನು ಈ ಸರ್ಕಾರ ಕಳೆದುಕೊಂಡಿದೆ. ಸಿಎಂ ಸ್ಥಾನಕ್ಕೆ ₹2500 ಕೋಟಿ ಕೊಡಬೇಕು ಅಂತಾ ಬಿಜೆಪಿ ಶಾಸಕ ಯತ್ನಾಳರೇ ಹೇಳುತ್ತಿದ್ದಾರೆ. ಭ್ರಷ್ಟಾಚಾರದ ಮೂಲಕ ಉದಯಿಸಿದ ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆರೋಪಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಕೆಲ ಕೋಮುವಾದಿ ಸಂಘಟನೆಗಳು ನಿರಂತರವಾಗಿ ಸಮಾಜ ಒಡೆಯುವ ಕೆಲಸ ಮಾಡುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಕೋಮು ಸಾಮರಸ್ಯದ ನಾಡಿನಿಂದ ಬಂದಿದ್ದಾರೆ. ಸಮಾಜ ಒಡೆಯುವವರ ಮೇಲೆ ಸಿಎಂ ಕಠಿಣ ಕ್ರಮ ಕೈಗೊಳ್ಳಬೇಕು. ಸಮಾಜ ಒಡೆಯುವ ಸಂಘಟನೆಗಳನ್ನು ನಿಷೇಧ ಮಾಡಬೇಕು. ಅಂತಹ ಸಂಘಟನೆಗಳ ವ್ಯಕ್ತಿಗಳನ್ನ ಬಂಧಿಸಬೇಕು ಎಂದರು.
ಸಾಮೂಹಿಕ ನಾಯಕತ್ವ: ಜನರು ಬಿಜೆಪಿ ಸರ್ಕಾರದ ಬಗ್ಗೆ ನೊಂದಿದ್ದಾರೆ. ಬಿಜೆಪಿಯ ನಲ್ವತ್ತು ಪರ್ಸೆಂಟ್ ಕಮಿಷನ್ ಸರ್ಕಾರದ ವಿರುದ್ದ ಕಾಂಗ್ರೆಸ್ ಜನಜಾಗೃತಿ ಮಾಡುವ ಕೆಲಸ ಮಾಡುತ್ತಿದೆ. ನಾವು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ.
ಭ್ರಷ್ಟ ಸರ್ಕಾರವನ್ನು ತಗೆಯುವುದೇ ನಮ್ಮ ಉದ್ದೇಶ. ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂಬುದು ಮುಂದಿನ ವಿಚಾರ ಎಂದು ಸಲೀಂ ಅಹ್ಮದ್ ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಬಿಟ್ರೆ ಕಾಂಗ್ರೆಸ್ ನಲ್ಲಿರೋ ಎಲ್ಲರೂ ಗುಂಡಾಗಳೇ: ಶಾಸಕ ಯತ್ನಾಳ್ ಗುಟುರು