ಹಾವೇರಿ: ಮೇಕೆದಾಟು ವಿಚಾರವನ್ನು ಅಧಿಕಾರದ ವಸ್ತುವನ್ನಾಗಿ ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ ಅನಾವಶ್ಯಕ ಗೊಂದಲಗಳು ಶುರುವಾಗುತ್ತವೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಹೇಳಿದ್ದಾರೆ.
ಹಾವೇರಿಯಲ್ಲಿ ಈ ಕುರಿತು ಮಾತನಾಡಿದ ಅವರು, ವಿದೇಶಿ ನೀತಿಯಲ್ಲಿ ದೇಶ ಪಕ್ಷಾತೀತವಾಗಿ ಹೇಗೆ ನಿರ್ಣಯ ಕೈಗೊಳ್ಳುತ್ತದೆಯೋ ಅದೇ ರೀತಿ ಮೇಕೆದಾಟು ವಿಚಾರದಲ್ಲಿಯೂ ರಾಜ್ಯ ಸರ್ಕಾರ ನಿರ್ಣಯ ಕೈಗೊಳ್ಳಬೇಕು. ಆಡಳಿತ ಪಕ್ಷ ಸರ್ವಪಕ್ಷಗಳ ಸಭೆ ಕರೆಯಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ರಾಜ್ಯ ಸರ್ಕಾರ ಯಾಕೆ ರೈತವಿರೋಧಿ ಕಾನೂನುಗಳನ್ನು ವಾಪಸ್ ಪಡೆಯುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ರಾಜ್ಯದಲ್ಲೂ ಅವರದ್ದೇ ಸರ್ಕಾರ. ಒಂದು ಜವಾಬ್ದಾರಿಯುತ ಸರ್ಕಾರ ತಕ್ಷಣವೇ ರೈತ ವಿರೋಧಿ ಕಾನೂನುಗಳನ್ನು ವಾಪಸ್ ತೆಗೆದುಕೊಳ್ಳಬೇಕಾಗಿತ್ತು. ಬೆಳಗಾವಿ ಅಧಿವೇಶನದಲ್ಲಿ ಈ ಕುರಿತಂತೆ ನಿರ್ಣಯ ಕೈಗೊಳ್ಳಲಾಗಿತ್ತು ಎಂದು ಹೇಳಿದರು.
ಸರ್ಕಾರ ಮುಂದಿನ ಅಧಿವೇಶನದಲ್ಲಿ ರೈತವಿರೋಧಿ ಕಾನೂನು ವಾಪಸ್ ತೆಗೆದುಕೊಳ್ಳುವುದಾಗಿ ತಿಳಿಸಿತ್ತು. ಆದರೆ, ಇಲ್ಲಿಯವರೆಗೆ ಈ ಕುರಿತಂತೆ ಚರ್ಚೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಜನಾಂದೋಲನಗಳ ಮಹಾಮೈತ್ರಿ ಜನಜಾಗೃತಿ ಜಾಥಾ ಕೈಗೊಳ್ಳಲಾಗಿದೆ. ಇದೇ 15 ರಂದು ಬೆಂಗಳೂರಿನಲ್ಲಿ ಸಮಾವೇಶ ಕೈಗೊಳ್ಳಲಾಗುತ್ತದೆ. ಶಾಸಕರು, ಸಚಿವರು, ಜನಪ್ರತಿನಿಧಿಗಳು, ಜನರಸೇವಕರು ಜನಪರ ನಿಲುವು ತೆಗೆದುಕೊಳ್ಳಬೇಕು ಎಂದು ಹಿರೇಮಠ ತಿಳಿಸಿದರು.
ಇದನ್ನೂ ಓದಿ: ಕೃಷಿ ಪಂಪ್‌ಸೆಟ್‍ಗಳಿಗೆ ಹಗಲು ವೇಳೆ 4 ಗಂಟೆ 3 ಪೇಸ್ ವಿದ್ಯುತ್ ಕೊಡಿ: ಪಕ್ಷಬೇಧ ಮರೆತು ಶಾಸಕರ ಒತ್ತಾಯ