ಹಾವೇರಿ: ಮೈತ್ರಿ ಸರ್ಕಾರದ ಶಾಸಕರು ರಾಜೀನಾಮೆ ನೀಡುತ್ತಿರುವ ವಿಚಾರಕ್ಕೆ ಮಾಜಿ ಸಚಿವದ್ವಯರು ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ರಾಜಕಾರಣದಲ್ಲೇ ಇದು ಬಹುದೊಡ್ಡ ಬೆಳವಣಿಗೆ. ಈ ಪ್ರಕ್ರಿಯೆ ಕೇವಲ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಷ್ಟ್ರಾದ್ಯಾಂತ ನಡೆಯುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಕುಮಾರಸ್ವಾಮಿ ನಡುವಿನ ಕೆಮಿಸ್ಟ್ರಿ ಮೊದಲೇ ಸರಿ ಇರಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ಒತ್ತಾಯದ ಮದುವೆ ಮಾಡಿತ್ತು. ಇದೀಗ ಅದು ಬಯಲಾಗಿದೆ. ಕುಮಾರಸ್ವಾಮಿ ಸಹ ರಾಜೀನಾಮೆ ನೀಡುವ ಮೂಲಕ ತಮ್ಮ ಗೌರವ ಉಳಿಸಿಕೊಳ್ಳಬೇಕಿದೆ ಎಂದರು.
ಬಿಜೆಪಿ ರಾಜ್ಯಧ್ಯಕ್ಷರು ಮತ್ತು ರಾಷ್ಟ್ರಾಧ್ಯಕ್ಷರು ಎಲ್ಲವನ್ನ ವೀಕ್ಷಣೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸ್ಥಿರ ಮತ್ತು ಜನಪರ ಸರ್ಕಾರ ಮಾಡಲು ಏನೆಲ್ಲಾ ತೀರ್ಮಾನಗಳನ್ನು ಕೈಗೊಳ್ಳಬೇಕೆಂದು ಯೋಚಿಸುತ್ತಿದ್ದಾರೆ. ಇನ್ನು ರಾಜ್ಯಪಾಲರು ರಾಜ್ಯದ ಸ್ಥಿತಿ ಅರ್ಥಮಾಡಿಕೊಳ್ಳಬೇಕು. ರಾಜ್ಯದಲ್ಲಿ ಅಸ್ಥಿರ ಸರ್ಕಾರದ ಬದಲು ಸ್ಥಿರ ಸರ್ಕಾರ ರಚನೆಗೆ ಒತ್ತು ಕೊಡಬೇಕು. ಸಂವಿಧಾನಾತ್ಮಕ ತೀರ್ಮಾನ ಕೈಗೊಳ್ಳಬೇಕು. ರಾಜ್ಯದಲ್ಲಿ ಬರ ಇದೆ, ಮುಂಗಾರು ವಿಳಂಬವಾಗಿದೆ. ಇದನ್ನೆಲ್ಲಾ ಎದುರಿಸಲು ಸೂಕ್ತ ಸರ್ಕಾರ ರಚನೆಗೆ ಅವಕಾಶ ಕಲ್ಪಿಸಬೇಕು ಎಂದು ಬೊಮ್ಮಾಯಿ ಹೇಳಿದರು.
ಇನ್ನು ಇದೇ ವಿಚಾರಕ್ಕೆ ಪ್ರತಿಕ್ರಯಿಸಿರುವ ಮಾಜಿ ಸಚಿವ ಸಿ.ಎಂ.ಉದಾಸಿ, ರಾಜ್ಯ ರಾಜಕಾರಣದಲ್ಲಿ ಶಾಸಕರ ರಾಜೀನಾಮೆ ವಿಚಾರ ಹೊಸದೇನಲ್ಲ. ಇಂತಹ ಸಾಕಷ್ಟು ಘಟನೆಗಳನ್ನ ನಾನು ನೋಡಿದ್ದೇನೆ. ಈ ಕುರಿತಂತೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ರಾಜ್ಯಪಾಲರು ಶಾಸಕರ ರಾಜೀನಾಮೆ ಅಂಗೀಕಾರ ಮಾಡಿದ ನಂತರ ನಮ್ಮ ನಾಯಕರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಅದಕ್ಕೆ ಬದ್ಧ ಎಂದು ತಿಳಿಸಿದರು.