ಹಾವೇರಿ: ಉತ್ತರಕರ್ನಾಟಕದಲ್ಲಿ ಗಣೇಶ ಚತುರ್ಥಿ ದಿನ ಗಣೇಶನ ಹಬ್ಬ ಆಚರಿಸಿದರೆ, ಅದರ ಮರುದಿನ ಇಲಿವಾರ ಅಂತಾ ಆಚರಣೆ ಮಾಡಲಾಗುತ್ತದೆ. ಗಣೇಶನನ್ನು ಮೊದಲ ದಿನ ಪೂಜಿಸಿದರೆ, ಎರಡನೇಯ ದಿನ ವಿಜ್ಞೇಶನ ವಾಹನವಾದ ಮೂಷಿಕನಿಗೆ ಪ್ರಾಶಸ್ತ್ಯ ನೀಡಲಾಗುತ್ತದೆ.
ಹಾವೇರಿ ಜಿಲ್ಲೆಯಲ್ಲಿ ಗುರುವಾರ ಇಲಿವಾರ ಆಚರಿಸಲಾಯಿತು. ಈ ದಿನ ಇಲಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಅಲ್ಲದೆ, ಮನೆಯಲ್ಲಿ ಬೆಲ್ಲದ ಇಲಿ ಮಾಡಿ ಪೂಜೆ ಸಲ್ಲಿಸುವುದು ಸಹ ವಾಡಿಕೆ ಇದೆ. ಮನೆಯಲ್ಲಿ ಸಾಕಷ್ಟು ಹಾನಿ ಮಾಡುವ ಜೀವಿ ಎಂದರೆ ಅದು ಇಲಿ. ಇಲಿಗೆ ಪೂಜೆ ಸಲ್ಲಿಸುವ ಮೂಲಕ ಹೆಚ್ಚು ಹಾನಿಮಾಡದಂತೆ ಬೇಡಿಕೊಳ್ಳಲಾಗುತ್ತದೆ. ಈ ದಿನ ಇಲಿಗೆ ವಿಶೇಷವಾಗಿ ಕರಿದ ಪದಾರ್ಥಗಳನ್ನ ತಯಾರಿಸಲಾಗುತ್ತದೆ. ಅಲ್ಲದೇ, ಇಲಿ ಓಡಾಡುವ ಸ್ಥಳದಲ್ಲಿ ನೈವೇದ್ಯ ಇಟ್ಟು ಅದನ್ನ ತಿನ್ನುವಂತೆ ನೋಡಿಕೊಳ್ಳಲಾಗುತ್ತದೆ.
ಇಲಿರಾಯನ ಕೃಪೆಗೆ ಬೇಡಿಕೆ: ಇನ್ನು ಈ ದಿನ ನೇಕಾರರು, ಟೇಲರ್ ಮತ್ತು ಮಡಿವಾಳರು ಗಣೇಶನ ಮೂರ್ತಿ ಮನೆಗೆ ತಂದಂತೆ ಇಲಿ ಮೂರ್ತಿಯನ್ನ ತರುತ್ತಾರೆ. ಈ ರೀತಿ ತಂದ ಇಲಿಯ ಮೂರ್ತಿಗಳನ್ನು ಅಂಗಡಿಯಲ್ಲಿಟ್ಟು ಪೂಜೆ ಸಲ್ಲಿಸುತ್ತಾರೆ. ತಮ್ಮ ವೃತ್ತಿಗೆ ಇಲಿಯ ಆಶೀರ್ವಾದ ಬೇಕು. ನಮ್ಮ ವೃತ್ತಿಯಲ್ಲಿ ವರ್ಷಪೂರ್ತಿ ಇಲಿರಾಯನ ಕೃಪೆ ಇರಲಿ ಎಂದು ಬೇಡಿಕೊಳ್ಳುತ್ತಾರೆ.
ಉತ್ತರಕರ್ನಾಟಕದಲ್ಲಿ ಇಲಿವಾರ ಸಂಭ್ರಮ: ಈ ದಿನ ಟೇಲರಿಂಗ್ ಶಾಪ್. ಲಾಂಡ್ರಿ ಶಾಪ್ ಮತ್ತು ನೇಕಾರರು ತಮ್ಮ ಕಾಯಕ ಮಾಡುವುದಿಲ್ಲ. ಈ ದಿನ ಪೂರ್ತಿ ಇಲಿಗೆ ಮೀಸಲಿಡುವ ಇವರು, ಸಂಪೂರ್ಣವಾಗಿ ಇಲಿವಾರ ಆಚರಿಸುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಇರಿಸಲಾದ ಗಣೇಶ ಮೂರ್ತಿಗಳಲ್ಲಿ ಈ ದಿನ ಇಲಿಗೆ ಪೂಜೆ ಸಲ್ಲಿಸಿದ ನಂತರವಷ್ಟೇ ಗಣೇಶನಿಗೆ ಪೂಜೆ ಸಲ್ಲಿಸಲಾಗುತ್ತದೆ. ಕಳೆದ ಹಲವು ವರ್ಷಗಳಿಂದ ಈ ಸಂಪ್ರದಾಯ ಉತ್ತರಕರ್ನಾಟಕದಲ್ಲಿ ಆಚರಣೆಯಲ್ಲಿದೆ.
ಕರಿದ ತಿನಿಸುಗಳ ನೈವೇದ್ಯ: ಗಣೇಶನಿಗೆ ಮೊದಲ ದಿನ ಆದ್ಯತೆ ನೀಡುವ ಭಕ್ತರು ಎರಡನೇಯ ದಿನ ಆತನ ವಾಹನ ಇಲಿಗೆ ಸಹ ಪ್ರಾಶಸ್ತ್ಯ ನೀಡುವುದು ಗಮನ ಸೆಳೆಯುತ್ತೆ. ಇಲಿಗಾಗಿ ಮಿರ್ಚಿ, ಬಜ್ಜಿ, ವಡೆ ಸೇರಿದಂತೆ ಕರಿದ ತಿನಿಸುಗಳ ನೈವೇದ್ಯ ಮಾಡಲಾಗುತ್ತದೆ. ಇವತ್ತು ರಾತ್ರಿ ಇಲಿ ಸೇವನೆಗಾಗಿ ಪ್ರತ್ಯೇಕ ತಟ್ಟೆಯಲ್ಲಿ ಈ ಪದಾರ್ಥಗಳನ್ನ ಇರಿಸಲಾಗುತ್ತೆ.