ರಾಣೆಬೆನ್ನೂರು: ತಾಲೂಕಿನ ಅಧಿಕಾರಿಗಳು ನನ್ನ ಆದೇಶದಂತೆ ಕೆಲಸ ಮಾಡಬೇಕೆ ಹೊರತು ಇತರರ ಮಾತಿನಂತೆ ಕೆಲಸ ಮಾಡಬಾರದು ಎಂದು ಶಾಸಕ ಅರುಣಕುಮಾರ ಪೂಜಾರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ಏರ್ಪಡಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾಲೂಕಿನ ಅಧಿಕಾರಿಗಳು ರಾಜಕೀಯ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ತಾಲೂಕಿನಲ್ಲಿ ಅಧಿಕಾರಿಗಳು ರಾಜಕೀಯ ಮಾಡಲು ಅವಕಾಶವಿಲ್ಲ, ಇಲ್ಲಿ ನನ್ನ ಆದೇಶದಂತೆ ಕೆಲಸ ನಡೆಯಬೇಕು ಎಂದರು.
ಕ್ಷೇತ್ರದಲ್ಲಿ ಈಗಾಗಲೇ ಎಲ್ಲಾ ಕಾಮಗಾರಿಗಳು ನಡೆಯುತ್ತಿವೆ. ಆದರೆ ಕೆಲವೊಂದು ಕಾಮಗಾರಿಗಳು ಅರ್ಧಕ್ಕೆ ನಿಂತಿರುವ ಬಗ್ಗೆ ಮಾಹಿತಿ ನೀಡಬೇಕು. ಹಳ್ಳಿಗಳ ಅಭಿವೃದ್ಧಿ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ತಾಕೀತು ಮಾಡಿದರು.
ಈ ವೇಳೆ ತಾಲೂಕು ಪಂಚಾಯತ್ ಇಒ ಶ್ಯಾಮಸುಂದರ ಕಾಂಬಳೆ, ಪೌರಾಯುಕ್ತ ಎನ್. ಮಹಾಂತೇಶ, ಜಿ.ಪಂ. ಸದಸ್ಯ ಶಿವಾನಂದ ಕನ್ನಪ್ಪಳವರ ಭಾಗಿಯಾಗಿದ್ದರು.