ರಾಣೆಬೆನ್ನೂರು (ಹಾವೇರಿ): ನಗರದ ಚೌಡೇಶ್ವರಿ ದೇವಸ್ಥಾನ ಬಳಿ ಯುಜಿಡಿ ದುರಸ್ತಿಗಾಗಿ ರಸ್ತೆ ಅಗೆದಿರುವ ನಗರಸಭೆಯವರು, ಒಂದು ತಿಂಗಳಾದರೂ ದುರಸ್ತಿ ಮಾಡದೆ ಹಾಗೆಯೇ ಬಿಟ್ಟಿರುವುದರಿಂದ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ.
ಈ ರಸ್ತೆ ರಾಣೆಬೆನ್ನೂರು-ಮೇಡ್ಲೇರಿ, ಬೇಲೂರು, ಯಕಲಾಸಪುರ ಸೇರಿದಂತೆ ಸುಮಾರು 10 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಆದ್ದರಿಂದ ಈ ರಸ್ತೆ ಮಾರ್ಗವಾಗಿ ನೂರಾರು ವಾಹನಗಳು ಸಂಚರಿಸುತ್ತವೆ. ಅಲ್ಲದೇ, ಈ ರಸ್ತೆ ದೇವಸ್ಥಾನದ ಬಳಿ ಇರುವುದರಿಂದ ದಿನನಿತ್ಯ ನೂರಾರು ಭಕ್ತರು ಇಲ್ಲಿಗೆ ಬರುತ್ತಾರೆ. ನಗರಸಭೆಯವರು ಯುಜಿಡಿ ದುರಸ್ತಿಗಾಗಿ ರಸ್ತೆ ಅಗೆದು ಹಾಗೆಯೇ ಬಿಟ್ಟಿರುವುದರಿಂದ ಜನತೆ ಕಿರಿಕಿರಿ ಅನುಭವಿಸುವಂತಾಗಿದೆ.
ಅಪಘಾತಕ್ಕೆ ಆಹ್ವಾನ: ಈ ಮುಖ್ಯ ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು ಚಲಿಸುತ್ತವೆ. ರಸ್ತೆ ಅಗೆತದಿಂದ ರಾತ್ರಿ ಸಮಯದಲ್ಲಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಇನ್ನು, ರಸ್ತೆಯಲ್ಲಿ ಮುಳ್ಳು ತಂದು ಹಾಕಿರುವುದರಿಂದ ರಸ್ತೆ ತುಂಬೆಲ್ಲಾ ಮುಳ್ಳುಗಳು ಹರಡಿದ್ದು, ವಾಹನಗಳು ಪಂಕ್ಚರ್ ಆಗುತ್ತಿವೆ. ಹೀಗಾಗಿ ನಗರಸಭಾ ಅಧಿಕಾರಿಗಳು ಆದಷ್ಟು ಬೇಗನೆ ಈ ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.