ಹಾವೇರಿ : ಚುನಾವಣಾ ಕಣ ರಂಗೇರಿದೆ. ರಾಷ್ಟ್ರೀಯ ಪಕ್ಷಗಳ ನಾಯಕರ ಆರೋಪ-ಪ್ರತ್ಯಾರೋಪಗಳು ಅಖಾಡದಲ್ಲಿ ಸದ್ದು ಮಾಡುತ್ತಿವೆ. ಪ್ರಧಾನಿ ಮೋದಿಯವರ ಸುತ್ತಮುತ್ತ ಇರುವವರು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮಾಡದೇ ಇರುವವರನ್ನೆಲ್ಲ ಬಿಜೆಪಿಯವರು ಪಕ್ಷದಿಂದ ಹೊರಗೆ ಕಳುಹಿಸುತ್ತಿದ್ದಾರೆ ಎಂದು ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಇಂದು ನಡೆದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಮ್ಮು ಕಾಶ್ಮೀರದಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಬಿಜೆಪಿಯಲ್ಲಿ ಹಿರಿಯ ನಾಯಕ ಶೆಟ್ಟರ್ಗೆ ಯಾವ ಸ್ಥಿತಿ ಬಂತು. ಅವರಿಗೆ ಬಿಜೆಪಿಯಿಂದ ಟಿಕೆಟ್ ಕೊಡದೇ ಇರಲು ಹಾಗೂ ಪಕ್ಷದಿಂದ ಹೊರ ಬರಲು ಕಾರಣ ಏನು?. ಅವರು ಭ್ರಷ್ಟಾಚಾರ ಮಾಡಿಲ್ಲ. ಹಾಗಾಗಿ ಅವರಿಗೆ ಟಿಕೆಟ್ ಕೊಟ್ಟಿಲ್ಲ ಎಂದು ರಾಹುಲ್ ಹೇಳಿದ್ರು.
ಜಗದೀಶ್ ಶೆಟ್ಟರ್ ಅವರು 40% ಕಮಿಷನ್ ತೆಗೆದುಕೊಳ್ಳಲಿಲ್ಲ. ಅದಕ್ಕೆ ಬಿಜೆಪಿಯಿಂದ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಮೋದಿಜಿಯವರ ಸುತ್ತಮುತ್ತ ಇರುವವರು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮಾಡದೆ ಇರುವವರನ್ನು ಪಕ್ಷದಿಂದ ಹೊರ ಹಾಕುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಟೀಕಾಪ್ರಹಾರ ನಡೆಸಿದರು.
ಬಿಜೆಪಿಯವರು ಭ್ರಷ್ಟಾಚಾರದಲ್ಲೂ ರಿಯಾಯಿತಿ ಕೊಡುತ್ತಿದ್ದಾರೆ. ಯಾವುದೇ ಕೆಲಸಕ್ಕಾದರೂ 40% ಕಮಿಷನ್ ಕೊಡಬೇಕು. ಮೈಸೂರು ಸ್ಯಾಂಡಲ್ ಸೋಪು ಕಾರ್ಖಾನೆಯಲ್ಲಿ 8 ಕೋಟಿ ಅವ್ಯವಹಾರ ನಡೆದಿದೆ. ಉದ್ಯೋಗದಲ್ಲೂ ಭ್ರಷ್ಟಾಚಾರ ನಡೆದಿದೆ. ಈ ಸರ್ಕಾರ ಕಳ್ಳತನದಿಂದ ಕೂಡಿದ ಸರ್ಕಾರ. ಹಣ ಕೊಟ್ಟು ಶಾಸಕರನ್ನು ಖರೀದಿ ಮಾಡಿದ ಸರ್ಕಾರ. ಸಿಎಂ ಆಗಲು ಕೋಟಿ ಕೋಟಿ ಹಣ ಕೊಡಬೇಕು ಎಂದು ಬಿಜೆಪಿಯವರೆ ಹೇಳುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ರು.
ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾವು ನೀಡಿರುವ ನಾಲ್ಕು ಗ್ಯಾರಂಟಿಗಳನ್ನು ನಿಶ್ಚಿತವಾಗಿಯೂ ಜಾರಿಗೆ ತರುತ್ತೇವೆ. ನಮ್ಮ ಸರ್ಕಾರ ಬಂದ ಮೊದಲ ದಿನವೇ ಈ ಕಾಯಕ್ರಮಗಳು ಜಾರಿಗೆ ಬರುತ್ತವೆ. ಅಂಬಾನಿ, ಅದಾನಿ ಅವರಿಗೆ ಈ ಭರವಸೆಗಳಿಂದ ಯಾವ ಲಾಭವೂ ಆಗುವುದಿಲ್ಲ ಎಂದು ರಾಹುಲ್ ಟೀಕಿಸಿದರು.
ಈ ಬಾರಿ ಕಾಂಗ್ರೆಸ್ 150 ಸೀಟುಗಳನ್ನು ಗೆಲ್ಲುತ್ತದೆ. ನೀವು 150 ಸೀಟುಗಳನ್ನು ಗೆಲ್ಲಿಸಿಕೊಡಬೇಕು. ಒಂದು ವೇಳೆ ಗೆಲ್ಲಿಸಿ ಕೊಡದಿದ್ದರೆ ಬಿಜೆಪಿಯವರು ಎಂಎಲ್ ಎಗಳನ್ನು ಖರೀದಿ ಮಾಡಲು ಹಣ ಖರ್ಚು ಮಾಡುತ್ತಾರೆ. ಈ ಸಲ ಬಿಜೆಪಿಯು 40 ಸೀಟ್ಗಳಿಂದ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದರು.
ಹಾನಗಲ್ ಪಟ್ಟಣದಲ್ಲಿ ರೋಡ್ ಶೋ ನಡೆಸಿದ ರಾಹುಲ್ ಗಾಂಧಿ ಜಿಲ್ಲೆಯ ಆರು ಕ್ಷೇತ್ರದ ಕೈ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರು. ಕಾರ್ಯಕ್ರಮದಲ್ಲಿ ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ರಾಹುಲ್ ಗಾಂಧಿ ಪಕ್ಕದಲ್ಲೇ ಜಗದೀಶ್ ಶೆಟ್ಟರ್ ಕುಳಿತಿದ್ದರು.
ಇದನ್ನೂ ಓದಿ : ನಾನು ಬಿಜೆಪಿಗೆ ರಾಜೀನಾಮೆ ನೀಡಿಲ್ಲ, ಪಕ್ಷದಲ್ಲಿಯೇ ಮುಂದುವರೆಯುತ್ತೇನೆ: ನೆಹರು ಓಲೇಕಾರ್