ಹಾವೇರಿ: ಜಿಲ್ಲೆಯಾದ್ಯಂತ ಸಂಭ್ರಮದಿಂದ ಯುಗಾದಿ ಆಚರಿಸಲಾಯಿತು. ಮುಂಜಾನೆ ಹೊಸ ಉಡುಪುಗಳನ್ನು ಧರಿಸಿದ ಭಕ್ತರು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಯುಗಾದಿ ಅಂಗವಾಗಿ ಪುರಸಿದ್ದೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ದೇವಾಲಯವನ್ನು ಸುಂದರವಾಗಿ ಅಲಂಕರಿಸಲಾಗಿದೆ.
ಶನಿವಾರ ಸಂಜೆ ಪುರಸಿದ್ದೇಶ್ವರ ಮೂರ್ತಿಯನ್ನು ರಥದಲ್ಲಿಟ್ಟು ರಥೋತ್ಸವ ನಡೆಸಲಾಯಿತು. ಈ ರಥೋತ್ಸವಕ್ಕೆ ಹುಕ್ಕೇರಿಮಠದ ಸದಾಶಿವ ಶ್ರೀಗಳು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ನಂತರ ಹುಕ್ಕೇರಿಮಠದವರೆಗೆ ಶ್ರೀಗಳು ರಥದೊಂದಿಗೆ ಭಕ್ತರ ಜೊತೆ ಹೆಜ್ಜೆ ಹಾಕಿದರು. ಪುರಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ರಥೋತ್ಸವ ಅಕ್ಕಮಹಾದೇವಿ ದೇವಸ್ಥಾನದವರೆಗೆ ನಡೆಯಿತು. ಅಲ್ಲಿಂದ ಪುನಃ ಪುರಸಿದ್ದೇಶ್ವರ ದೇವಸ್ಥಾನಕ್ಕೆ ಮರಳಿತು.
ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಈ ವೇಳೆ ಮಹಿಳೆಯರು ಆರತಿ ಬೆಳಗಿ, ತೆಂಗಿನಕಾಯಿ ಬಾಳೆಹಣ್ಣು ಸಮರ್ಪಿಸಿದರು. ರಥದ ಕಳಸಕ್ಕೆ ಭಕ್ತರು ಉತ್ತತ್ತಿ ಎಸೆದು ಭಕ್ತಿಭಾವ ಮೆರೆದರು. ರಥೋತ್ಸವಕ್ಕೆ ಮಾಡಿದ ವಿದ್ಯುತ್ ದೀಪಾಲಂಕಾರ ಎಲ್ಲರ ಗಮನ ಸೆಳೆಯಿತು.
ಕಳೆದೆರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಜಾತ್ರೆಯನ್ನು ಸರಳವಾಗಿ ಆಚರಿಸಲಾಗುತ್ತಿತ್ತು. ಆದರೆ ಈ ವರ್ಷ ಕೋವಿಡ್ ಹಾವಳಿ ಕಡಿಮೆಯಾದ ಕಾರಣ ಭಕ್ತರು ಪುರಸಿದ್ದೇಶ್ವರ ಜಾತ್ರೆಯನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಜಾತ್ರೋತ್ಸವ ಸಮಿತಿ ಯುಗಾದಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ. ರವಿವಾರ ಮತ್ತು ಸೋಮವಾರ ರಾಜ್ಯಮಟ್ಟದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿ ನಡೆಯಲಿದೆ.
ಇದನ್ನೂ ಓದಿ: ರಂಜಾನ್ ಮಾಸ ಆರಂಭ: ಪ್ರಧಾನಿ ಮೋದಿ, ರಾಹುಲ್ ಗಾಂಧಿ ಶುಭಾಶಯ