ಹಾವೇರಿ : ಕೊರೊನಾ ಇದೀಗ ಹಳ್ಳಿಗಳಿಗೆ ಸಹ ಹರಡುತ್ತಿದೆ. ಗ್ರಾಮಗಳಲ್ಲಿ ಈ ಕುರಿತಂತೆ ಜಾಗೃತಿ ವಹಿಸದೆ ಇರುವ ಕಾರಣ ಕೊರೊನಾ ಪೀಡಿತರ ಸಂಖ್ಯೆ ಅಧಿಕವಾಗುತ್ತಿದೆ.
ಓದಿ: 10 ಗಂಟೆಯ ಬಳಿಕವೂ ಬಾರ್ ಓಪನ್ ಮಾಡಿ ಅಕ್ರಮ ಮದ್ಯ ಮಾರಾಟ: ಮೂವರ ಬಂಧನ
ಈ ಮಧ್ಯ ಗ್ರಾಮಗಳಲ್ಲಿ ಅನಗತ್ಯವಾಗಿ ಯುವಕರು ದ್ವಿಚಕ್ರವಾಹನದಲ್ಲಿ ಓಡಾಡುವುದು ಸಾಮಾನ್ಯವಾಗಿದೆ. ಮನೆಯಲ್ಲಿರದೆ ಹೊರಗೆ ಬರುವವರಿಗೆ ಸವಣೂರು ತಾಲೂಕಿನ ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಹೊಸ ಪ್ಲಾನ್ ಮಾಡಿದ್ದಾರೆ. ಈ ರೀತಿ ಗ್ರಾಮದಲ್ಲಿ ಓಡಾಡುವರಿಗೆ ಈ ಅಧಿಕಾರಿಗಳು ಬಸ್ಕಿ ಶಿಕ್ಷೆ ನೀಡುತ್ತಿದ್ದಾರೆ.
ಸವಣೂರು ಪೊಲೀಸ್ ಠಾಣೆಯ ಎಎಸ್ಐ ಕಲ್ಲಪ್ಪ ರೋಗಿ ಮತ್ತು ತಹಶೀಲ್ದಾರ್ ಸಿ.ಎಸ್ ಭಂಗಿ ಈ ರೀತಿಯ ಶಿಕ್ಷೆ ನೀಡುತ್ತಿದ್ದಾರೆ. ತಾಲೂಕಿನ ಹೊವಿನಶಿಗ್ಲಿ, ಬನ್ನಿಕೊಪ್ಪ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಧಿಕಾರಿಗಳು ಬಸ್ಕಿ ಶಿಕ್ಷೆ ನೀಡುತ್ತಿದ್ದಾರೆ.
ಅನಗತ್ಯ ಓಡಾಡುವವರ ಕಿವಿ ಹಿಂಡಿಸಿ, ಇಪ್ಪತ್ತು ಬಸ್ಕಿ ಹೊಡೆಸಿ ನಂತರ ಮನೆಗೆ ಕಳಿಸುತ್ತಾರೆ. ಮತ್ತೆ ಹೊರಗೆ ಬಂದರೆ ಡಬಲ್ ಬಸ್ಕಿ ಹೊಡೆಯುವ ಶಿಕ್ಷೆ ನೀಡುತ್ತೇವೆ ಎನ್ನುತ್ತಿದ್ದಾರೆ.
ಮನೆಯಿಂದ ಹೊರಗೆ ಬರಬೇಡಿ ತೀರಾ ಅನಿವಾರ್ಯವಾದರೆ, ಸರಿಯಾದ ರೀತಿಯಲ್ಲಿ ಮಾಸ್ಕ್ ಧರಿಸಿ ಹೊರಗೆ ಬನ್ನಿ. ನಿಮ್ಮ ಕೆಲಸವಾಗುತ್ತಿದ್ದಂತೆ ಮನೆ ಸೇರಿಕೊಳ್ಳಿ, ನಿಮ್ಮ ಜೊತೆಗೆ ನಿಮ್ಮ ಕುಟುಂಬದ ಸದಸ್ಯರನ್ನ ರಕ್ಷಿಸಿ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಗ್ರಾಮ ಗ್ರಾಮಗಳಿಗೆ ಭೇಟಿ ನೀಡುತ್ತಿರುವ ಈ ಅಧಿಕಾರಿಗಳು ಕೊರೊನಾ ಕುರಿತಂತೆ ಗ್ರಾಮಸ್ಥರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.