ರಾಣೆಬೆನ್ನೂರು: ತಹಸೀಲ್ದಾರ ಕಚೇರಿ ಆವರಣದಲ್ಲಿರುವ ಉಪನೊಂದಣಾಧಿಕಾರಿ ಕಚೇರಿ ಸ್ಥಳಾಂತರ ಮಾಡದಂತೆ ಸಾರ್ವಜನಿಕರು ಪ್ರತಿಭಟನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಉಪನೊಂದಣಾಧಿಕಾರಿ ಕಚೇರಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸುಮಾರು ಒಂದು ದಶಕದಿಂದ ಕಾರ್ಯನಿರ್ವಹಿಸುತ್ತಿದೆ. ಕಚೇರಿ ಕೊಠಡಿ ಚಿಕ್ಕದಿರುವ ಕಾರಣ ಇದನ್ನು ಬೇರೆ ಖಾಸಗಿ ಕಟ್ಟಡಕ್ಕೆ ಸ್ಥಳಾಂತರ ಮಾಡುವ ಹುನ್ನಾರ ನಡೆಯುತ್ತಿದೆ. ಈ ಕಚೇರಿ ಸ್ಥಳಾಂತರ ಮಾಡುವುದರಿಂದ ಸಾರ್ವಜನಿಕರಿಗೆ ಅನಾನಕೂಲವಾಗಲಿದೆ ಎಂದು ಸಾರ್ವಜನಿಕರು ಪ್ರತಿಭಟಿಸಿದ್ದಾರೆ.
ಸರ್ಕಾರ ಒಂದೇ ಸೂರಿನಡಿ ಎಲ್ಲಾ ಸೌಲಭ್ಯಗಳು ಸಿಗಬೇಕು ಎಂದು ಆದೇಶ ಹೊರಡಿಸಿದೆ. ಆದರೆ ಕೆಲವರು ದುರುದ್ದೇಶದಿಂದ ಬೇರೆಡೆ ಸ್ಥಳಾಂತರ ಮಾಡಲು ಹೊರಟಿದ್ದಾರೆ. ತಹಸೀಲ್ದಾರ ಕಚೇರಿ ಹಿಂದೆ ಸಾಕಷ್ಟು ಜಾಗವಿದೆ ಅಲ್ಲಿಯೆ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಿ ಉಪನೊಂದಣಾಧಿಕಾರಿ ಕಚೇರಿ ಮಾಡಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.