ಹಾವೇರಿ: ಕಂಟೇನ್ಮೆಂಟ್ ಜೋನ್ ತೆರವು ಮಾಡುವಂತೆ ಒತ್ತಾಯಿಸಿ ಜಿಲ್ಲೆಯ ಸವಣೂರು ಪಟ್ಟಣದ ಎಸ್ಎಂ ಕೃಷ್ಣ ಮತ್ತು ರಾಜೀವಗಾಂಧಿ ನಗರದ ಜನರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಮೇ 4ರಂದು ಮುಂಬೈನಿಂದ ಬಂದಿದ್ದ ಪಟ್ಟಣದ ಎಸ್ಎಂ ಕೃಷ್ಣ ನಗರದ ಓರ್ವನಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಸೋಂಕು ದೃಢಪಡುತ್ತಿದ್ದಂತೆ ಜಿಲ್ಲಾಡಳಿತ ಎರಡೂ ಪ್ರದೇಶಗಳನ್ನ ಸೀಲ್ಡೌನ್ ಮಾಡಿತ್ತು. ನಂತರ ಆ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಒಂದರಿಂದ ಮೂರಕ್ಕೆ ಏರಿತ್ತು.
ಮೂವರು ಗುಣಮುಖರಾಗಿ ಮೇ 23, ಮೇ 25 ಮತ್ತು ಜೂನ್ 1 ರಂದು ಜಿಲ್ಲಾಸ್ಪತ್ರೆಯ ಕೋವಿಡ್ 19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಹೀಗಾಗಿ ಕಂಟೇನ್ಮೆಂಟ್ ಪ್ರದೇಶವನ್ನ ತೆರವು ಮಾಡಿ ಎಂದು ಸ್ಥಳೀಯ ನಿವಾಸಿಗಳು ಸಾಮಾಜಿಕ ಅಂತರವನ್ನೂ ಲೆಕ್ಕಿಸದೇ ಪ್ರತಿಭಟನೆ ನಡೆಸಿದರು.
ಎಸ್ ಎಂ.ಕೃಷ್ಣ ನಗರ ಮತ್ತು ರಾಜೀವಗಾಂಧಿ ನಗರದ ಬಹುತೇಕ ಜನರಿಗೆ ಕೂಲಿ ಕೆಲಸವೇ ಆಧಾರವಾಗಿದೆ. ಆದ್ರೆ ಒಂದು ತಿಂಗಳಿನಿಂದ ಯಾವುದೇ ಕೆಲಸವಿಲ್ಲದೇ ಜೀವನ ಕಷ್ಟವಾಗಿದೆ. ಹೀಗಾಗಿ ಕಂಟೇನ್ಮೆಂಟ್ ಜೋನ್ ತೆರವು ಮಾಡುವಂತೆ ಜನರು ಗುಂಪು ಗುಂಪಾಗಿ ಸೇರಿಕೊಂಡು ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸವಣೂರು ಠಾಣೆ ಪೊಲೀಸರು ಹಾಗೂ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಇನ್ನೂ ಕೆಲವು ದಿನಗಳ ಕಾಲ ಸೀಲ್ಡೌನ್ ತೆರವು ಮಾಡಲು ಆಗೋದಿಲ್ಲ. ಜಿಲ್ಲಾಡಳಿತದ ಜೊತೆ ಚರ್ಚಿಸಿ ಸಮಸ್ಯೆ ಪರಿಹರಿಸೋದಾಗಿ ಸ್ಥಳೀಯರ ಮನವೊಲಿಸಿದ ನಂತರ ಸ್ಥಳೀಯರು ಪ್ರತಿಭಟನೆ ಹಿಂಪಡೆದಿದ್ದಾರೆ.