ಹಾವೇರಿ: ಸಮೃದ್ಧಿ ಜೀವನ ಮಲ್ಟಿ ಸ್ಟೇಟ್ ಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಗ್ರಾಹಕರಿಗೆ ವಂಚನೆ ಮಾಡಿದೆ ಎಂದು ಆರೋಪಿಸಿ ಹಾವೇರಿಯಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಮಾನವಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ವೇದಿಕೆಯಿಂದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು. ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಹಾವೇರಿ ಜಿಲ್ಲೆಯೊಂದರಲ್ಲಿ ನೂರು ಕೋಟಿಗೂ ಅಧಿಕ ವಂಚನೆಯಾಗಿದೆ ಎಂದು ವೇದಿಕೆ ಕಾರ್ಯಕರ್ತರು ಆರೋಪಿಸಿದರು. ಸರ್ಕಾರ ಈ ಕೂಡಲೇ ಗ್ರಾಹಕರ ನೆರವಿಗೆ ಬರಬೇಕು.
ಗ್ರಾಹಕರಿಗೆ ವಂಚನೆ ಮಾಡಿದ ಸೊಸೈಟಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ವೇದಿಕೆ ಸದಸ್ಯರು ಒತ್ತಾಯಿಸಿದರು.