ಹಾವೇರಿ: ಹೊನ್ನತ್ತಿ- ರಾಣೆಬೆನ್ನೂರು ರಾಜ್ಯ ಹೆದ್ದಾರಿ ನಡುವೆ ನಿರ್ಮಿಸುತ್ತಿರುವ ರೈಲ್ವೆ ಕೇಳಸೇತುವೆ ಕಾಮಗಾರಿ ವಿರೋಧಿಸಿ ನ.4ರಂದು ರೈಲ್ವೆ ಮೇಲ್ಸೇತುವೆ ನಿರ್ಮಾಣ ಹೋರಾಟ ಸಮಿತಿಯ ಸದಸ್ಯರು ರೈಲು ತಡೆ ನಡೆಸಲಿದ್ದಾರೆ.
ಸಮಿತಿ ಅಧ್ಯಕ್ಷ ರವಿಂದ್ರಗೌಡ ಪಾಟೀಲ್, ರಾಣೆಬೆನ್ನೂರಿನಲ್ಲಿ ಇರುವ ಮೂರು ರೈಲು ಗೇಟ್ಗಳು ಹಲವಾರು ಹಳ್ಳಿಗಳಿಗೆ ಸಂಪರ್ಕಿಸುತ್ತವೆ. ಇದರಲ್ಲಿ ಗಂಗಾಪುರ ಗೇಟ್ (ಗೇಟ್ ಸಂಖ್ಯೆ 218), ಮೆಡ್ಲರಿ ಗೇಟ್ಗಳನ್ನು (ಗೇಟ್ ಸಂಖ್ಯೆ 217) ಮುಚ್ಚಲಾಗಿದೆ. ಅಲ್ಲದೇ, ಇರುವ ದೇವರಗುಡ್ಡ ಗೇಟ್ಗೆ ಅವೈಜ್ಞಾನಿಕವಾಗಿ ಕೇಳಸೇತುವೆ ನಿರ್ಮಿಸಲಾಗುತ್ತಿದೆ.
ಈ ನಿಟ್ಟಿನಲ್ಲಿ ಮಳೆಗಾಲದಲ್ಲಿ ಸೇತುವೆ ಕೆಳಗಡೆ ನೀರು ನಿಂತು ವಾಹನ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಅನೇಕ ಹೋರಾಟಗಳು ನಡೆದಿದ್ದರೂ ಜನಪ್ರತಿನಿಧಿಗಳು ಪ್ರತಿಕ್ರಿಯಿಸಿಲ್ಲ. ಕೆಳಸೇತುವೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಮಳೆ ನೀರು ನಿಂತು ಕೆರೆಯಂತಾಗಿದೆ. ಈ ಸಮಸ್ಯೆಯಿಂದಾಗಿ ವಿವಿಧ ಗ್ರಾಮಗಳಿಗೆ ಜನರು ತೆರಳಲು ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ರೈಲು ತಡೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.