ಹಾವೇರಿ: ನಕಲಿ ಬಿತ್ತನೆ ಬೀಜ ಸಂಗ್ರಹ ಮಾಡಿ ಇಟ್ಟಿದ್ದವರ ಮೇಲೆ ಕ್ರಮ ಕೈಗೊಳ್ಳದಂತೆ ಕೆಲವು ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳು ಒತ್ತಡ ಹೇರುತ್ತಿದ್ದಾರೆ. ಆದ್ರೆ ನಾನು ಯಾವುದೇ ಒತ್ತಡಕ್ಕೆ ಮಣಿಯೋದಿಲ್ಲ. ಒತ್ತಡಕ್ಕೆ ಮಣಿದ್ರೆ ರೈತರ ಪರಿಸ್ಥಿತಿ ತಾಯಿಯೇ ಮಗನಿಗೆ ವಿಷ ಹಾಕಿದಂತಾಗುತ್ತೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕಳೆದ ವಾರ ಹಾವೇರಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ನಕಲಿ ಬಿತ್ತನೆ ಬೀಜ ಸಂಗ್ರಹ ಮಾಡಿದ್ದ ಅಡ್ಡೆಗಳ ಮೇಲೆ ದಾಳಿ ಮಾಡಿದ್ರು. ದಾಳಿ ವೇಳೆ ಒಂದು ಲಕ್ಷದ ಆರು ನೂರಾ ಎಂಬತ್ತೈದು ಕ್ವಿಂಟಲ್ ನಕಲಿ ಬಿತ್ತನೆ ಬೀಜವನ್ನ ಜಪ್ತಿ ಮಾಡಿದ್ದಾರೆ.
ಆದ್ರೆ ಪೊಲೀಸ್ ಇಲಾಖೆ ಈವರೆಗೂ ಒಬ್ಬ ಆರೋಪಿಯನ್ನೂ ಬಂಧನ ಮಾಡಿಲ್ಲ. ನಕಲಿ ಬೀಜ ಸಂಗ್ರಹ ಮಾಡಿದ್ದವರು ಮತ್ತು ನಕಲಿ ಬೀಜ ಮಾರಾಟ ಮಾಡ್ತಿದ್ದವರನ್ನ ಬಂಧಿಸಿ ಜೈಲಿಗೆ ಅಟ್ಟುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಅಲ್ಲದೇ ನಕಲಿ ಬಿತ್ತನೆ ಬೀಜ ತಯಾರಿಸುವವರ ಮೂಲವನ್ನ ಪತ್ತೆ ಮಾಡಿ ರೈತರಿಗೆ ಆಗ್ತಿರೋ ದೊಡ್ಡ ಅನ್ಯಾಯವನ್ನ ತಪ್ಪಿಸುವಂತೆ ಗೃಹ ಸಚಿವರು ಮತ್ತು ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದೇನೆ ಎಂದರು.
ಅವಧಿ ಮೀರಿದ ರಸಗೊಬ್ಬರ ಮಾರಾಟ ಮಾಡೋದು ಕಂಡುಬಂದ್ರೆ, ಅಂತಹ ಅಂಗಡಿಗಳ ಲೈಸನ್ಸ್ ರದ್ದು ಮಾಡೋದಾಗಿ ತಿಳಿಸಿದ್ರು. ಇನ್ನು ಪ್ರಸಕ್ತ ವರ್ಷ ರೈತರಿಗೆ ಬೇಕಾದ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಆಗದಂತೆ ಕ್ರಮ ಕೈಗೊಂಡಿದ್ದೇವೆ ಎಂದು ಸಚಿವ ಪಾಟೀಲ ಹೇಳಿದ್ರು.