ಹಾವೇರಿ: ಕೇಂದ್ರ ಮತ್ತು ರಾಜ್ಯದಲ್ಲಿರುವ ಸರ್ಕಾರಗಳು ನಾಲಾಯಕ್ ಸರ್ಕಾರಗಳು ಎಂದು ವಾಲ್ಮೀಕಿ ಪೀಠದ ಸ್ವಾಮಿಜಿ ಪ್ರಸನ್ನಾನಂದ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ವಿಚಾರದಲ್ಲಿ ಸರ್ಕಾರಗಳು ಅಶ್ವಾಸನೆ ನೀಡುತ್ತವೆ ಆದರೆ ಜಾರಿಗೆ ತರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮೀಸಲಾತಿ ನಿಮ್ಮಪ್ಪನ ಮನೆ ಆಸ್ತಿಯಲ್ಲ, ಅದು ಸಂವಿಧಾನಬದ್ಧ ಹಕ್ಕು ಅದನ್ನು ನಾವು ಕೇಳುತ್ತಿದ್ದೇವೆ ಎಂದು ತಿಳಿಸಿದರು.
ರಾಜಕೀಯ ಮುಖಂಡರು ಮೀಸಲಾತಿ ವಿಚಾರದಲ್ಲಿ ನಮ್ಮ ಕಿವಿಗೆ ಹೂ ಇಡಲು ಬರುತ್ತಾರೆ. ಈ ಸಾರಿ ಅವರು ಹೂ ಇಡಲು ಬಂದರೆ ಅದನ್ನ ತೆಗೆದು ಅವರ ಕಿವಿಗೆ ಇಡುತ್ತೇವೆ ಎಂದು ತಿಳಿಸಿದರು. ವಾಲ್ಮೀಕಿ ಸಮಾಜ ಹೋರಾಟ ಆರಂಭಿಸುವುದು ಕಷ್ಟ ಆದರೆ ಹೋರಾಟ ಶುರುವಾದರೆ ನಮ್ಮನ್ನ ಹಿಡಿಯುವುದು ಕಷ್ಟ ಎಂದು ತಿಳಿಸಿದರು.
ಬೇಡರ ಶಾಪ ಕೆಟ್ಟದ್ದು, ನಮ್ಮ ಶಾಪದಿಂದ ಸಮ್ಮಿಶ್ರ ಸರ್ಕಾರ ಬಿದ್ದಿದ್ದು ಸಿಎಂ ಯಡಿಯೂರಪ್ಪ ಈ ಕೂಡಲೇ ಕ್ಯಾಬಿನೆಟ್ ಸಭೆ ಕರೆಯಬೇಕು. ಸಭೆಯಲ್ಲಿ ನ್ಯಾಯಮೂರ್ತಿ ನಾಗಮೋಹನದಾಸ್ ವರದಿ ಅನುಷ್ಠಾನಗೊಳಿಸುವಂತೆ ಸ್ವಾಮಿಜಿ ಆಗ್ರಹಿಸಿದರು. ಬೇಡರು ಛಾಟಿ ಬೀಸಿದ್ದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಬಿತ್ತು. ಬಿಜೆಪಿಯವರ ಚರ್ಮ ಸ್ವಲ್ಪ ದಪ್ಪವಿದೆ ಎಂದು ಸ್ವಾಮಿಜಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಸರ್ಕಾರಗಳು ವಾಲ್ಮೀಕಿ ಸಮುದಾಯದ ಬೇಡಿಕೆಗಳನ್ನು ಈಡೇರಿಸಬೇಕು. ಈ ಕುರಿತಂತೆ ಇದೇ 21 ರಿಂದ ಬೆಂಗಳೂರಿನಲ್ಲಿ ನಾನು ಧರಣಿ ಸತ್ಯಾಗ್ರಹ ಕೈಗೊಳ್ಳುತ್ತೇನೆ. ಸರ್ಕಾರಕ್ಕೆ 10 ದಿನಗಳ ಕಾಲಾವಕಾಶ ನೀಡುತ್ತೇನೆ. ಒಂದು ವೇಳೆ ಸರ್ಕಾರ ಬೇಡಿಕೆ ಈಡೇರಿಸದಿದ್ದರೇ ಇದೇ 31 ರಂದು ವಾಲ್ಮೀಕಿ ಸಮಾಜಕ್ಕೆ ಬೆಂಗಳೂರು ಚಲೋ ಕರೆ ನೀಡುತ್ತೇನೆ. ಸರ್ಕಾರ ನಮ್ಮನ್ನು ಬಂಧಿಸಿದರು ಸಹ ಪರ್ವಾಗಿಲ್ಲ ನಮ್ಮ ಬೇಡಿಕೆ ಈಡೇರುವವರಿಗೆ ಪ್ರತಿಭಟನೆ ಮುಂದುವರೆಸುವುದಾಗಿ ಸ್ವಾಮಿಜಿ ಎಚ್ಚರಿಕೆ ನೀಡಿದರು.